ಮನೆ ರಾಷ್ಟ್ರೀಯ ತೇಜಿಂದರ್ ಬಗ್ಗಾ ವಿರುದ್ಧ ಮೇ 10 ರವರೆಗೆ ಕ್ರಮಕೈಗೊಳ್ಳದಂತೆ ಮೊಹಾಲಿ ಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದ...

ತೇಜಿಂದರ್ ಬಗ್ಗಾ ವಿರುದ್ಧ ಮೇ 10 ರವರೆಗೆ ಕ್ರಮಕೈಗೊಳ್ಳದಂತೆ ಮೊಹಾಲಿ ಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌

0

ಚಂಡೀಗಢ (Chandigarh)-ಬಿಜೆಪಿ ನಾಯಕ ತೇಜಿಂದರ್ ಬಗ್ಗಾ (Tejinder Bugga) ಅವರಿಗೆ ಪಂಜಾಬ್-ಹರಿಯಾಣ ಹೈಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ನಿಂದ ಶನಿವಾರ ಮಧ್ಯರಾತ್ರಿ ಮುಕ್ತಿ ನೀಡಿದೆ.

ಅಲ್ಲದೆ, ಮೇ 10ರವರೆಗೆ ತಜೀಂದರ್ ಬಗ್ಗಾ ಅವರನ್ನು ಬಂಧಿಸದಂತೆ ಸೂಚಿಸಿ, ಮೊಹಾಲಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಪಂಜಾಬ್‌ ಪೊಲೀಸರು ಕಳೆದ ತಿಂಗಳು ದಾಖಲಿಸಿದ್ದ ಪ್ರಕರಣವೊಂದರಲ್ಲಿ ಮೊಹಾಲಿ ಕೋರ್ಟ್‌ ಶನಿವಾರ ಜಾಮೀನು ರಹಿತ ಬಂಧನ ವಾರಂಟ್ ಅನ್ನು ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಗ್ಗಾ ಶನಿವಾರ ಮಧ್ಯರಾತ್ರಿ ಹೈಕೋರ್ಟ್‌ ಮೊರೆಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಬಗ್ಗಾ ವಿರುದ್ಧದ ಬಂಧನ ವಾರಂಟ್‌ಗೆ ತಡೆ ನೀಡಿದೆ. ಅಲ್ಲದೇ, ಮುಂದಿನ ವಿಚಾರಣೆವರೆಗೆ, ಅಂದರೆ ಮೇ 10ರವರೆಗೆ ಅವರ ವಿರುದ್ಧ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚಂಡೀಗಢದಲ್ಲಿರುವ ನ್ಯಾಯಮೂರ್ತಿ ಅನೂಪ್ ಚಿತ್ಕಾರ ಅವರ ನಿವಾಸದಲ್ಲಿ ಶನಿವಾರ ಮಧ್ಯರಾತ್ರಿ ಅರ್ಜಿಯ ವಿಚಾರಣೆ ನಡೆಯಿದೆ.

ವಿಚಾರಣೆ ವೇಳೆ ಬಗ್ಗಾ ಅವರು ಪರ ವಕೀಲರ ಮೂಲಕ ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಮನವಿಯಲ್ಲಿ ಮಾಡಿಕೊಂಡಿದ್ದಾರೆ.

ಪ್ರಚೋದನಕಾರಿ ಹೇಳಿಕೆ, ದ್ವೇಷ ಪ್ರಚೋದನೆ, ಬೆದರಿಕೆಯೊಡ್ಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ತಜಿಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮೊಹಾಲಿ ನಿವಾಸಿ ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರ ದೂರನ್ನು ಆಧರಿಸಿ, ಐಪಿಸಿ ಸೆಕ್ಷನ್‌ 153-A, 505, 505 (2), 506 ಅಡಿ ಪ್ರಕರಣ ದಾಖಲಿಸಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಮಾರ್ಚ್ 30 ರಂದು ಬಿಜೆಪಿ ಯುವ ಘಟಕ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಗ್ಗಾ ಅವರು ನೀಡಿದ್ದ ಹೇಳಿಕೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಬಗ್ಗಾ ಅವರನ್ನು ಶುಕ್ರವಾರ ಅವರ ದೆಹಲಿ ನಿವಾಸದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ಗೆ ಕರೆದೊಯ್ಯುವಾಗ ಹರಿಯಾಣದಲ್ಲಿ ಅವರನ್ನು ತಡೆಯಲಾಗಿತ್ತು. ಬಳಿಕ ಬಗ್ಗಾ ಅವರನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.