ಮನೆ ಸ್ಥಳೀಯ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆತರಲು ಅಧಿಕಾರಿಗಳು ಕ್ರಮವಹಿಸಬೇಕು: ಎಸ್ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆತರಲು ಅಧಿಕಾರಿಗಳು ಕ್ರಮವಹಿಸಬೇಕು: ಎಸ್ ಮಧು ಬಂಗಾರಪ್ಪ

0

ಮೈಸೂರು.: ಹಲವಾರು ಕಾರಣಗಳಿಂದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ತೊರೆಯುತ್ತಿದ್ದಾರೆ. ಅಧಿಕಾರಿಗಳು ಆ ಕಾರಣಗಳನ್ನು ತಿಳಿದು, ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಸರ್ಕಾರಿ ಶಾಲೆಗಳತ್ತ ಅವರನ್ನು ಕರೆತರಲು ಕ್ರಮವಹಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

 ಇಂದು ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್ ಸಾಭ್ ಸಭಾಂಗಣದಲ್ಲಿ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಕುರಿತು ಜಿಲ್ಲೆ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರೋನಾ ಬಂದ ನಂತರ ನೋಡುವುದಾದರೆ 14000 ಮಕ್ಕಳು ಹಲವಾರು ಕಾರಣಗಳಿಂದ ಶಾಲೆ ಬಿಟ್ಟು ಹೋಗಿರುವುದು ಕಂಡುಬoದಿದೆ. ಅಲ್ಲದೆ ಮೈಸೂರಿನಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ ಶಿಕ್ಷಣದ ಗುಣಮಟ್ಟದಲ್ಲಿ ಕಡಿಮೆ ಆಗುತ್ತಿರುವುದರಿಂದ 25000 ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗೆ ಓದಲು ಹೋಗುತ್ತಿದ್ದಾರೆ. ಇದಕ್ಕೆ ಶಿಕ್ಷಕರ ಕೊರತೆಯೂ ಕಾರಣವಾಗಿದ್ದು, ಅದರ ಸಲುವಾಗಿಯೇ 1000 ಹೆಚ್ಚುವರಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರು ಹೆಚ್ಚು ಬುದ್ದಿವಂತರು ಮತ್ತು ತಿಳುವಳಿಕೆಯುಳ್ಳವರು ಅವರನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡು ಮುಂಬರುವ ವರ್ಷಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

 ರಾಜ್ಯದಲ್ಲಿ ಶಿಕ್ಷಣ ಇಲಾಖೆಯು ದೊಡ್ಡ ಇಲಾಖೆಯಾಗಿದೆ. ಹಾಗೆಯೇ ಇಲ್ಲಿ ಸಮಸ್ಯೆಗಳು ಇವೆ. ಇದನ್ನು ಪರಿಹರಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡಬೇಕು. ರಾಜ್ಯದಾದ್ಯಂತ 48000 ಸರ್ಕಾರಿ ಶಾಲೆಗಳಿದ್ದು, ಸರ್ಕಾರದಿಂದ ಬಂದoತಹ ಅನುದಾನದಲ್ಲ್ಲಿ ಮುಂದಿನ ಮೂರು ವರ್ಷದೊಳಗೆ 3000 ಕೆ.ಪಿ.ಎಸ್. ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರು

 ಶಾಲೆಯ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು ಮತ್ತು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಪೋಷಕರಿಗೆ ಹಾಗೂ ಮಕ್ಕಳಿಗೆ ತಿಳಿಯುವಂತೆ ಮಾಡಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಬೇಕು. ಮಾಹಿತಿಯ ಪ್ರಕಾರ 7 ನೇ ತರಗತಿಯ ನಂತರ ಮಕ್ಕಳು ಶಾಲೆಯನ್ನು ಬಿಡುತ್ತಿದ್ದಾರೆ. ಈ ಬಾರಿಯ ಶೈಕ್ಷಣಿಕ ವರ್ಷ ಪ್ರಾರಂಭವಾಗಲು ಇನ್ನು 3 ರಿಂದ 4 ತಿಂಗಳ ಕಾಲಾವಕಾಶ ಇರುವುದರಿಂದ ಆದಷ್ಟು ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಿ ದಾಖಲಾತಿ ಹೆಚ್ಚಿಸಿ ಎಲ್ಲಾ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಬೇಕು ಎಂದರು.

 ಸಮವಸ್ತ್ರ, ಶೂ, ಮದ್ಯಾಹ್ನ ಊಟ, ಹಾಲು, ಮೊಟ್ಟೆ ಇವೆಲ್ಲವೂ ಎಲ್ಲಾ ಮಕ್ಕಳಿಗೂ ಸಿಗುವಂತೆ ಮಾಡಬೇಕು. ಮಕ್ಕಳಿಗೆ ಆಸಕ್ತಿ ತರುವ ಯೋಜನೆಗಳನ್ನು ರೂಪಿಸಿ ಅವರಲ್ಲಿ ಓದಿನ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ಆತ್ಮ ಸ್ಥೈರ್ಯ ತುಂಬಬೇಕು. ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ತರುವುದು ನಮ್ಮ ಕರ್ತವ್ಯ. ಎಲ್ಲಾ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಿ ಮಕ್ಕಳು ಸರ್ಕಾರಿ ಶಾಲೆಗಳತ್ತ ತಾವಾಗಿಯೇ ಬರುವಂತೆ ಮಾಡಬೇಕು. ಆದರ್ಶ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿ ಪಿ ಯು ಕಾಲೇಜುಗಳಾಗಿ ಪರಿವರ್ತಿಸಬೇಕು ಎಂದರು.

 ಪ್ರಾಥಮಿಕ ಶಾಲಾ ಮಕ್ಕಳು ನೆಲದಲ್ಲಿ ಕೂತು ಪಾಠ ಕೇಳುವ ಪರಿಸ್ಥಿತಿ ಕಂಡುಬಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚುವರಿ ಡೆಸ್ಕ್ ವ್ಯವಸ್ಥೆ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾನ ವಿದ್ಯಾಭ್ಯಾಸ ಪಡೆಯುವಂತೆ ಮಾಡಲಾಗುತ್ತದೆ. ಫೇಲ್ ಆದ ಯಾವುದೇ ವಿದ್ಯಾರ್ಥಿಗೆ ಮತ್ತೊಂದು ಅವಕಾಶ ಇದೆ ಎಂದು ಉತ್ತೇಜನ ನೀಡಬೇಕೆ ಹೊರತು, ಅವರನ್ನು ಮಾನಸಿಕವಾಗಿ ಕುಂದಿಸುವ ಕೆಲಸ ಆಗಬಾರದು. ಡಿಜಿಟಲ್ ಲೈಬ್ರರಿಗಳನ್ನು ಸ್ಥಾಪಿಸಿ ಅದರಿಂದ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುವಂತೆ ಆಗಬೇಕು ಎಂದು ಹೇಳಿದರು.

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಕೆ. ಎಂ. ಗಾಯತ್ರಿ ಅವರು ಮಾತನಾಡಿ ಶಾಲೆಯ ಸ್ವಚ್ಛತೆ ಹಾಗೂ ಶೌಚಾಲಯದ ಸ್ವಚ್ಛತೆಗೆ ಸಂಬoಧಿಸಿದoತೆ ಗ್ರಾಮ ಪಂಚಾಯಿತಿಗಳಲ್ಲಿ ಸ್ಕ್ಯಾವೆಂಜರ್ಸ್ಗಳನ್ನು ನೇಮಿಸಿ ಸ್ವಚ್ಛಗೊಳಿಸಲಾಗುವುದು. ವಿದ್ಯಾರ್ಥಿಗಳು ಶುಲ್ಕ ಪಾವತಿಸಲಾಗದೆ ಶಾಲೆ ಬಿಡುತ್ತಿದ್ದಾರೆ. ಇದಕ್ಕೂ ಪರಿಹಾರವಾಗಿ ಅನುದಾನಿಗಳಿಂದ ಹಣ ಪಡೆದು ಶುಲ್ಕ ಪಾವತಿಸಿ ಮಕ್ಕಳ ಓದಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿ ಅಲ್ಲಿ ಓದಿಗೆ ಸಂಬoಧಿಸಿದ ವಿವಿಧ ತರಬೇತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

 ಮಕ್ಕಳನ್ನು ಮಾನಸಿಕವಾಗಿ ಬದಲಾವಣೆ ಮಾಡಿ ಅವರಲ್ಲಿ ಓದುವ ಮನೋಭಾವವನ್ನು ಬೆಳೆಸುವಂತೆ ಮಾಡಬೇಕು.ಅದಕ್ಕಾಗಿ ವಿಶೇಷ ತರಗತಿಗಳನ್ನು ಮತ್ತು ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

 ಮೈಸೂರು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಹೆಚ್. ಕೆ ಪಾಂಡು ಅವರು ಮಾತನಾಡಿ ಈ ಬಾರಿ ಮೈಸೂರು ಸರಾಸರಿ ಸಾಕ್ಷರತಾ ಪ್ರಮಾಣವು 87.67% ಇದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿಸುವ ಗುರಿ ಇದೆ ಎಂದರು.

 ಇದುವರೆಗೂ ಮಕ್ಕಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ಪ್ರೇರಣಾದಾಯಿ ಕಾರ್ಯಕ್ರಮ, ರೇಡಿಯೋ ಕಾರ್ಯಕ್ರಮ, ಸಸ್ಯ ಶ್ಯಾಮಲ ಕಾರ್ಯಕ್ರಮ, ಶಾಲಾ ಬಿಟ್ಟ ಮಕ್ಕಳ ಸಮೀಕ್ಷೆ ಜಾಥಾ, ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಫಲಿತಾಂಶ ಬರುತ್ತಿದೆ. ಈಗಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಮುಂದಿನ ವರ್ಷಗಳಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಕೆಲಸ ಮಾಡಲಾಗುತ್ತದೆ ಎಂದರು.

 ಚಾಮರಾಜನಗರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 1171 ಸರ್ಕಾರಿ ಶಾಲೆಗಳಿದ್ದು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2023-24 ನೇ ಸಾಲಿನ ದಾಖಲಾತಿಯಲ್ಲಿ 3938 ಕುಸಿತ ಕಂಡಿದ್ದು ಇದಕ್ಕೆ ಪ್ರಾಥಮಿಕ ಶಿಕ್ಷಣದ ನಂತರದ ವಿದ್ಯಾಭ್ಯಾಸ ಕ್ಕೆ ಮಕ್ಕಳಿಗೆ ಇರುವ ಸೌಲಭ್ಯದ ಕೊರತೆ, ಬುಡಕಟ್ಟು ಜನಾಂಗದ ಮಕ್ಕಳು ಶಾಲೆ ಬಿಡುತ್ತಿರುವುದು ಹಾಗೂ ಖಾಸಗಿ ಶಾಲೆ ಮೇಲಿನ ಒಲವಾಗಿದೆ ಎಂದರು.

 ಸರಾಸರಿ ಸಾಕ್ಷರತಾ ಪ್ರಮಾಣವು 93% ಇದ್ದು, ಇದನ್ನು ಹೆಚ್ಚಿಸಲು ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಮಕ್ಕಳು ಹೆಚ್ಚಾಗಿರುವುದರಿಂದ ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ನಿರಂತರವಾಗಿ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಉತ್ತೇಜಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಸರ್ಕಾರಿ ಶಿಕ್ಷಕರಿಂದಲೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವು ಮಾಡಿಕೊಡಲಾಗುತ್ತಿದೆ ಎಂದರು.

 ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ, ಚಾಮರಾಜನಗರದ ಮುಖ್ಯ ನಿರ್ವಹಣಾಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ, ಸಚಿವರ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್, ಮೈಸೂರು ಜಿಲ್ಲೆಯ ಬಿಇಒ ಗಳ ಉಪನಿದೇರ್ಶಕರಾದ ಮಹದೇವಸ್ವಾಮಿ, ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.