ದಾವಣಗೆರೆ: ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಾಣ ಆಗಲಿದೆ. ವಾಲ್ಮೀಕಿ ಮಂದಿರ ನಿರ್ಮಾಣದಲ್ಲಿ 23 ಸಾವಿರ ಶ್ಲೋಕಗಳನ್ನು ಕೆತ್ತನೆ ಮಾಡಿಸಲಾಗುವುದು. ಈ ವಿಚಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗಮನಕ್ಕೆ ತರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ವಾಲ್ಮೀಕಿ ಜಾತ್ರೆ ಪ್ರಯುಕ್ತ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಚಿತ್ರದುರ್ಗದ ಸಾಹಿತಿ ಬಿಎಲ್ ವೇಣು ಅವರಿಗೆ ವಾಲ್ಮೀಕಿ ಗುರುಪೀಠದಿಂದ ಕೊಡಮಾಡಿದ ಒಂದು ಲಕ್ಷ ರೂಪಾಯಿ ನಗದು ಒಳಗೊಂಡ ವೀರ ರಾಜಾ ಮದಕರಿ ನಾಯಕ ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಮುಂದಿನ ಅವಧಿಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದುವರೆಯಲಿದ್ದಾರೆ. ವಾಲ್ಮೀಕಿ ಸಮಾಜಕ್ಕೆ ಶೇ 7.5 ಮೀಸಲಾತಿ ಹೆಚ್ಚಾಗುತ್ತದೆ. ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಇರುವ ಒಂಬತ್ತನೇ ಪರಿಚ್ಚೇದನಕ್ಕೆ ಸೇರ್ಪಡೆ ಮಾಡಿಸುತ್ತೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದೆ. ಹಾಲಿ ಕಾಂಗ್ರೆಸ್ ಸರ್ಕಾರದಿಂದ ಕೇಂದ್ರಕ್ಕೆ ಬೇಕಾದ ಶಿಪಾರಸ್ಸು ಮಾಡಿಸಿ. ಅಧಿಕಾರ ಎಂಬುದು ಶಾಶ್ವತವಲ್ಲ. ನಾನು ಸಿಎಂ ಆಗಿದ್ದಾಗ ಇಂದೇ ಕೊನೆಯ ದಿನ ಎಂದು ಕೆಲಸ ಮಾಡಿದ್ದೆ ಎಂದರು.
ವಾಲ್ಮೀಕಿ ಬರೆದ ರಾಮಾಯಣ ಜಗತ್ತಿನ 10 ಶ್ರೇಷ್ಠ ಕೃತಿಗಳಲ್ಲಿ ಒಂದು. ಚಿತ್ರದುರ್ಗದ ಮದಕರಿ ಪರಂಪರೆ ಹಿನ್ನೆಲೆ ವಾಲ್ಮೀಕಿ ಜನಾಂಗಕ್ಕೆ ಇದೆ. ಇಂದು ದೇಶ ಒಂದಾಗಿ ಉಳಿಯಲು ಮೂಲ ಕಾರಣ ವಾಲ್ಮೀಕಿ ಕುಲಕ್ಕೆ ಇದೆ. ವಾಲ್ಮೀಕಿ ಜನಾಂಗ ಮೊದಲು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇರಲಿಲ್ಲ. ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದು ರಾಮಕೃಷ್ಣ ಹೆಗಡೆ. ಕೇಂದ್ರದಲ್ಲಿ ಚಂದ್ರಶೇಖರ ನೇತೃತ್ವದ ಸರ್ಕಾರ ಇತ್ತು. ಇದನ್ನೆ ಒತ್ತಾಯ ಮಾಡಿ ಪಟ್ಟಿಗೆ ಸೇರಿದ್ದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು. ಇದೀಗ ವಾಲ್ಮೀಕಿ ಮೀಸಲಾತಿ ಹೆಚ್ಚಾಗ ಬೇಕು. ಇದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿದೆ ಎಂದರು.