ಮನೆ ಸುದ್ದಿ ಜಾಲ ಶ್ರೀಲಂಕಾ ಪ್ರಧಾನಿ ರಾಜಪಕ್ಸೆ ರಾಜೀನಾಮೆ ಬೆನ್ನೆಲ್ಲೇ ನಿವಾಸಕ್ಕೆ ಬೆಂಕಿ ಹಚ್ಚಿದ ಉದ್ರಿಕ್ತರ ಗುಂಪು

ಶ್ರೀಲಂಕಾ ಪ್ರಧಾನಿ ರಾಜಪಕ್ಸೆ ರಾಜೀನಾಮೆ ಬೆನ್ನೆಲ್ಲೇ ನಿವಾಸಕ್ಕೆ ಬೆಂಕಿ ಹಚ್ಚಿದ ಉದ್ರಿಕ್ತರ ಗುಂಪು

0

ಕೊಲಂಬೊ (Colombo)- ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ತೀವ್ರ ಆರ್ಥಿಕ ದಿವಾಳಿತನದ ಹಿನ್ನೆಲೆ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ (Mahinda Rajapaksas) ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ನಿವಾಸಕ್ಕೆ ಸರ್ಕಾರದ ವಿರೋಧಿ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದೆ. 

ಶ್ರೀಲಂಕಾದ ವಾಯುವ್ಯ ಪ್ರಾಂತ್ಯದ ಕುರುನೇಗಾಲ ನಗರದಲ್ಲಿರುವ ಮಹಿಂದಾ ರಾಜಪಕ್ಸೆ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ.

ಗಾಲೆ ಫೋರ್ಸ್‌ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯ ಹಿಂದೆ ಆಡಳಿತ ಪಕ್ಷದ ಕೈವಾಡವಿದೆ ಎಂದು ಸರ್ಕಾರದ ವಿರೋಧಿ ಗುಂಪು ಹಲವು ನಾಯಕರ ಮನೆಗೆ ಬೆಂಕಿ ಹಚ್ಚಿದೆ.

ಇದಕ್ಕೂ ಮುನ್ನ ಶ್ರೀಲಂಕಾದ ಮೊರಟುವಾ ಮೇಯರ್ ಸಮನ್ ಲಾಲ್ ಫೆರ್ನಾಂಡೋ ಮತ್ತು ಸಂಸದರಾದ ಸನತ್ ನಿಶಾಂತ, ರಮೇಶ್ ಪತಿರಾನಾ, ಮಹಿಪಾಲ ಹೆರಾತ್, ಥಿಸ್ಸಾ ಕುಟ್ಟಿಯಾರಾಚಿ ಮತ್ತು ನಿಮಲ್ ಲಾಂಜಾ ಅವರ ಅಧಿಕೃತ ನಿವಾಸಗಳಿಗೂ ಬೆಂಕಿ ಹಚ್ಚಿದ್ದಾರೆ.

ಇಂಟರ್-ಯೂನಿವರ್ಸಿಟಿ ಸ್ಟೂಡೆಂಟ್ಸ್ ಫೆಡರೇಶನ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಶ್ರೀಲಂಕಾ ಪೊದುಜನ ಪೆರಮುನಾ ಸಂಸದರ ಮೇಲೆ ದಾಳಿ ನಡೆಸಿದ್ದಾರೆ. ಎಸ್‌ಎಲ್‌ಪಿಪಿಯ ಕೆಲವು ಕಚೇರಿಗಳಿಗೆ ಕೂಡ ಬೆಂಕಿ ಹಚ್ಚಲಾಗಿದೆ ಎಂದು ಡೈಲಿ ಮಿರರ್‌ ವರದಿ ಮಾಡಿದೆ.

ವೀರಕೇಟಿಯ ಪ್ರಾಂತೀಯ ಸಭೆಯ ಅಧ್ಯಕ್ಷರ ನಿವಾಸದಲ್ಲಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಸರ್ವಪಕ್ಷಗಳ ಮಧ್ಯಂತರ ಸರ್ಕಾರವನ್ನು ರಚಿಸಲು ಪ್ರಧಾನಿಯವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ ನಂತರವೂ ಬೆಳವಣಿಗೆಗಳು ಬಂದಿವೆ. ದ್ವೀಪ ರಾಷ್ಟ್ರದಲ್ಲಿ ಕರ್ಫ್ಯೂ ಇದ್ದರೂ ಶಾಂತತೆಯನ್ನು ಕಾಪಾಡಿಕೊಳ್ಳಲು ಸೇನೆಯನ್ನು ರಸ್ತೆಗಳಲ್ಲಿ ನಿಯೋಜಿಸಲಾಗಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಕಳೆದ ಕೆಲವು ದಿನಗಳಿಂದ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಪ್ರತಿಭಟನಾ ಸ್ಥಳಗಳಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳೊಂದಿಗೆ ಘರ್ಷಣೆಯ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದ ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಯಲ್ಲಿದೆ.

ಇನ್ನು, ಗಾಲೆ ಫೋರ್ಸ್‌ ಪ್ರತಿಭಟನಾ ಸ್ಥಳದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆ ವೇಳೆ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಸೋಮವಾರ ಗಾಯಗೊಂಡಿದ್ದಾರೆ.

ಇನ್ನು, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕಿಂತ ಮುನ್ನ ಮಹಿಂದಾ ರಾಜಪಕ್ಸೆ ಜನರಲ್ಲಿ ಸಂಯಮದಿಂದ ವರ್ತಿಸಿ, ಶಾಂತಿ ಕಾಪಾಡುವಂತೆ ಮನವಿ ಮಾಡಿ ಟ್ವೀಟ್‌ ಮಾಡಿದ್ದರು. ಶ್ರೀಲಂಕಾದಲ್ಲಿ ಭಾವನೆಗಳು ಹೆಚ್ಚುತ್ತಿರುವಾಗ ನಾನು ನಮ್ಮ ಸಾರ್ವಜನಿಕರನ್ನು ಸಂಯಮದಿಂದ ವರ್ತಿಸುವಂತೆ ಒತ್ತಾಯಿಸುತ್ತೇನೆ. ಹಿಂಸೆಯು ಹಿಂಸೆಯನ್ನು ಮಾತ್ರ ಹುಟ್ಟುಹಾಕುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನಾವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಆರ್ಥಿಕ ಪರಿಹಾರದ ಅಗತ್ಯವಿದೆ, ಅದನ್ನು ಪರಿಹರಿಸಲು ಈ ಆಡಳಿತವು ಬದ್ಧವಾಗಿದೆ ಎಂದಿದ್ದರು.