ಮನೆ ಸ್ಥಳೀಯ ಹೆಚ್.ಡಿ.ಕೋಟೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಸ್ವಾಗತ

ಹೆಚ್.ಡಿ.ಕೋಟೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಸ್ವಾಗತ

0

ಮೈಸೂರು: ಭಾರತ ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರದಿಂದ ರಾಜ್ಯದ್ಯಾಂತ “ಸಂವಿಧಾನ ಜಾಗೃತಿ ಜಾಥಾ” ಸ್ತಬ್ಧ ಚಿತ್ರ ಸಂಚರಿಸುತ್ತಿದೆ. ಸಂವಿಧಾನ ಪೀಠಿಕೆ, ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಯೊಂದಿಗೆ ವಿಶೇಷವಾಗಿ ಸಿದ್ಧಪಡಿಸಿರುವ ರಥ ಇಂದು ಹೆಚ್.ಡಿ.ಕೋಟೆ ತಾಲ್ಲೂಕಿಗೆ ಆಗಮಿಸಿತು.

ಈ ಹಿನ್ನೆಲೆಯಲ್ಲಿ ಗುರುವಾರ ತಾಲ್ಲೂಕಿನ ಜಿ.ಬಿ.ಸರಗೂರು ಗ್ರಾಮ ಪಂಚಾಯಿತಿಯ ಶ್ರೀ ಕಾಶಿವಿಶ್ವನಾಥ ದೇವಸ್ಥಾನ ಆವರಣದಲ್ಲಿ ಪೂರ್ಣಕುಂಭ, ವಾದ್ಯಮೇಳ, ಶಾಲಾ ಮಕ್ಕಳು ಜಾಥಾ, ನಗಾರಿ ತಂಡಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಂವಿಧಾನ ಜಾಗೃತಿ ರಥ ಬರಮಾಡಿಕೊಂಡು ಸ್ವಾಗತಿಸಲಾಯಿತು. ಬಳಿಕ ಗಣ್ಯರು ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.

ಆಲನಹಳ್ಳಿ ಗ್ರಾಮ ಪಂಚಾಯಿತಿಯ ಗದ್ದಿಗೆ-ಹೆಚ್.ಡಿ.ಕೋಟೆ ಮುಖ್ಯ ರಸ್ತೆಯಲ್ಲಿ ಮಕ್ಕಳ ಡೊಳ್ಳು ಕುಣಿತ,ಕಂಸಾಳೆ, ವೀರಗಾಸೆ, ತಮಟೆ ನಾದ, ಪೂಜಾ ಕುಣಿತ ಹಾಗೂ ಬೈಕ್ ರ್ಯಾಲಿ ಮೂಲಕ ಸಂವಿಧಾನ ಜಾಗೃತಿ ರಥವನ್ನು ವಿಶೇಷಾವಗಿ ಸ್ವಾಗತಿಸಿದರು.
ಬಳಿಕ ಕ್ಯಾತನಹಳ್ಳಿ, ಬಾಚೇಗೌಡನಹಳ್ಳಿ ಹಾಗೂ ಚಿಕ್ಕೆರೆಯೂರು ಗ್ರಾಮ ಪಂಚಾಯಿತಿಗಳಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತ ಮಾಡಲಾಯಿತು. ಚಿಕ್ಕೆರೆಯೂರು ಗ್ರಾಮ ಪಂಚಾಯಿತಿಯಲ್ಲಿ ವೇದಿಕೆ ಕಾರ್ಯಕ್ರಮದ ಮೂಲಕ ಇಂದಿನ ದಿನ ನಿಗದಿಯಾಗಿದ್ದ ರಥ ಜಾಥಾ ಮುಕ್ತಾಯಗೊಂಡಿತು. ನಾಳೆ ಸವ್ವೆ ಗ್ರಾ.ಪಂ ನಿಂದ ರಥ ಪ್ರಾರಂಭವಾಗಲಿದೆ.

ಸಂವಿಧಾನ ಜಾಗೃತಿ ಜಾಥಾ ನಡೆದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ರಥದ ಎಲ್ಇಡಿ ಸ್ಕ್ರೀನ್ ನಲ್ಲಿ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಪ್ರದರ್ಶನ ಮಾಡಲಾಯಿತು. ಜೊತೆಗೆ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಸಂಸ್ಕೃತಿ ಕಲಾ ತಂಡದವರು ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಸಂಬಂಧಿಸಿ ಹಾಡುಗಳು ಹಾಗೂ ಬೀದಿ ನಾಟಕದ ಮೂಲಕ ಜನರಲ್ಲಿ ಸಂವಿಧಾನದ ಆಶಯದ ಬಗ್ಗೆ ಅರಿವು ಮೂಡಿಸಲಾಯಿತು.

ಈ ವೇಳೆ ತಹಸೀಲ್ದಾರ್ ಶ್ರೀನಿವಾಸ್ ಅವರು, ಕಾರ್ಯನಿರ್ವಾಹಕ ಅಧಿಕಾರಿಗಳಾದ ಧರಣೇಶ್ ಎಸ್.ಪಿ‌ ಅವರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪುರಸಭೆ ಸ್ಥಾಯಿ ಸಮಿತಿ ಸದಸ್ಯ ಹೆಚ್.ಸಿ.ನರಸಿಂಹಮೂರ್ತಿ, ಗ್ರಾ.ಪಂ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು,ಪಿಡಿಓಗಳು, ಸದಸ್ಯರು ಗ್ರಾಮದ ಮುಖಂಡರುಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.