ಮನೆ ರಾಜ್ಯ ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಮೇಲಿನ ದಂಡ ಶೇ. 50ರಷ್ಟು ಇಳಿಕೆ ತಿದ್ದುಪಡಿ ವಿಧೇಯಕ ಅಂಗೀಕಾರ

ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಮೇಲಿನ ದಂಡ ಶೇ. 50ರಷ್ಟು ಇಳಿಕೆ ತಿದ್ದುಪಡಿ ವಿಧೇಯಕ ಅಂಗೀಕಾರ

0

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇ. 50 ರಷ್ಟು ಕಡಿತ ಸೇರಿದಂತೆ ತೆರಿಗೆದಾರರ ಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024 ಅನ್ನು ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ಬೆಂಗಳೂರು ನಗರಾಭಿವೃದ್ದಿ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಮಸೂದೆಯನ್ನು ಮಂಡಿಸಿದರು. ಮಸೂದೆಯ ಕುರಿತು ವಿವರಣೆ ನೀಡಿದ ಶಿವಕುಮಾರ್‌, ‘ಬಡ ಮತ್ತು ದುರ್ಬಲ ವರ್ಗದವರಿಗೆ ಇದರಿಂದ ಅನುಕೂಲ ಆಗಲಿದೆ. ಸರ್ಕಾರದ ವಸತಿ ಯೋಜನೆಯ ಆಸ್ತಿಗಳು ಹಾಗೂ ಕೊಳೆಗೇರಿ ಪ್ರದೇಶದ ಕಟ್ಟಡಗಳಿಗೆ ಬಡ್ಡಿ ಮೇಲಿನ ದಂಡ ಇರುವುದಿಲ್ಲ. 1 ಸಾವಿರ ಚದರ ಅಡಿವರೆಗಿನ ಸ್ವಯಂ ಬಳಕೆ ಆಸ್ತಿದಾರರಿಗೆ ಸಂಪೂರ್ಣ ದಂಡ ವಿನಾಯಿತಿ ನೀಡಲಾಗಿದೆ ಎಂದರು.

ವಸತಿ ಮತ್ತು ಮಿಶ್ರ ಆಸ್ತಿದಾರರ (ವಸತಿ ಮತ್ತು ವಾಣಿಜ್ಯ) ಬಾಕಿಯನ್ನು ಎಷ್ಟೇ ವರ್ಷದಿಂದ ಉಳಿಸಿಕೊಂಡಿದ್ದರೂ ಹಿಂದಿನ 5 ವರ್ಷಕ್ಕೆ ಮಾತ್ರ ಲೆಕ್ಕಾಚಾರ ಹಾಕಲು ನಿರ್ಧರಿಸಲಾಗಿದೆ. 5 ವರ್ಷಕ್ಕಿಂತ ಹಿಂದಿನ ಅವಧಿಗೆ ಬಡ್ಡಿ ಮನ್ನಾ ಮಾಡಲಾಗಿದೆ. ಇದೊಂದು ಜನಸ್ನೇಹಿ ತಿದ್ದುಪಡಿ ಮಸೂದೆ. ಸರ್ಕಾರಕ್ಕೆ ನಷ್ಟವಾದರೂ ಪರವಾಗಿಲ್ಲ. ಜನರಿಗೆ ಅನುಕೂಲ ಆಗಲಿ ಎಂದು ಮಸೂದೆ ಮಂಡಿಸಲಾಗಿದೆ ಎಂದೂ ತಿಳಿಸಿದರು.

ಈ ತಿದ್ದುಪಡಿ ಮಸೂದೆಯಿಂದ ಬೆಂಗಳೂರಿನ ನಾಗರಿಕರಿಗೆ ತೆರಿಗೆ ಬಾಬ್ತು, ದಂಡ ವಿನಾಯಿತಿ ಸೇರಿ ಸುಮಾರು 2,700 ಕೋಟಿ ಅನುಕೂಲ ಆಗಲಿದೆ. ಜತೆಗೆ ಪಾಲಿಕೆಗೆ ಸುಮಾರು 1 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಬರಲಿದೆ. ಸುಮಾರು 5.51 ಲಕ್ಷ ತೆರಿಗೆ ಬಾಕಿದಾರರು, ಸುಮಾರು 5- 7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಹಾಗೂ 3 ಲಕ್ಷದಷ್ಟು ಮಂದಿ ಭಾಗಶಃ ತೆರಿಗೆ ಪಾವತಿದಾರರು ಸೇರಿ 13 ಲಕ್ಷದಿಂದ 15 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಆದಾಯ ಬರಬಹುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿದ್ದುಪಡಿಗೆ ಆಕ್ಷೇಪ ವ್ಯಕ್ತಪಡಿಸಿ, ಮಹಡಿ ವಿಸ್ತೀರ್ಣ ಅನುಪಾತವನ್ನು ಹೆಚ್ಚಿಸಿದರೆ ಹೆಚ್ಚು ದಟ್ಟಣೆ ಉಂಟಾಗುತ್ತದೆ. ರಸ್ತೆಗಳ ಮೇಲೆ ಹೆಚ್ಚಿನ ಒತ್ತಡವಿದ್ದಾಗ, ಮಹಡಿ ಪ್ರದೇಶದ ಅನುಪಾತವನ್ನು ಹೆಚ್ಚಿಸುವುದು ಹೆಚ್ಚು ಅವ್ಯವಸ್ಥೆಯನ್ನು ಸೇರಿಸುತ್ತದೆ. ಇದು ಹಣ ಮಾಡುವ ಮಸೂದೆಯಾಗಿದೆ ಎಂದು ಆರೋಪಿಸಿದರು.ಬಿಜೆಪಿ ಶಾಸಕರ ಪ್ರತಿಭಟನೆಯ ನಡುವೆಯೇ ಎರಡೂ ಮಸೂದೆಗಳನ್ನು ಅಂಗೀಕರಿಸಲಾಯಿತು, ರಾಜ್ಯ ಸರ್ಕಾರವು ಅವುಗಳ ಬಗ್ಗೆ ಚರ್ಚೆ ನಡೆಸದಿರುವುದನ್ನು ಟೀಕಿಸಿದರು.