ಮನೆ ಸ್ಥಳೀಯ ಸಂಸದ ಪ್ರತಾಪ್ ಸಿಂಹ ಕಚೇರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮುತ್ತಿಗೆ ಯತ್ನ

ಸಂಸದ ಪ್ರತಾಪ್ ಸಿಂಹ ಕಚೇರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮುತ್ತಿಗೆ ಯತ್ನ

0

ಮೈಸೂರು: ಇಂದು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ  ಜಿಲ್ಲೆಯ ರೈತರು ಮೈಸೂರು ಕೊಡಗು ಸಂಸದ  ಪ್ರತಾಪ್ ಸಿಂಹರವರ ಕಚೇರಿ ಬಳಿ ಜಮಾಯಿಸಿ ಮುತ್ತಿಗೆ ಹಾಕಲು ಯತ್ನಿಸಿದ ಪ್ರಯತ್ನಿಸಿದ್ದು, ಪೊಲೀಸರು ರೈತರನ್ನು ತಡೆದಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನೆಕಾರರ ಮಧ್ಯೆ ಮಾತಿನ ಚಕ ಮಕಿ ನಡೆದಿದ್ದು, ನೀವು ನಮ್ಮನ್ನು ಏಕೆ ತಡೆಗಟ್ಟುತ್ತಿದ್ದೀರಿ ನಮ್ಮ ಕ್ಷೇತ್ರದ ಸಂಸದರನ್ನು ನಾವು ಭೇಟಿ ಮಾಡಿ ರೈತರ ಸಮಸ್ಯೆ ಕುರಿತು ಒತ್ತಾಯಿಸಲು ಬಂದಿದ್ದೇವೆ ನಾವು ಬರುತ್ತೇವೆ ಎಂದು ಗೊತ್ತಿದ್ದರೂ ಸಹ ರೈತರಿಗೆ ಹೆದರಿ ಸಂಸದರು ಕಾಣೆಯಾಗಿದ್ದಾರೆ ಎಂದು ವಾಗ್ವಾದ ನಡೆಸಿದರು.

ರೈತ ವಿರೋಧಿ ಸಂಸದರಿಗೆ ಧಿಕ್ಕಾರ ಕಾಣೆಯಾಗಿರುವ ಸಂಸದರನ್ನು ಹುಡುಕಿ ಕೊಡಿ ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ವಿಫಲವಾಗಿರುವ ಸಂಸದರಿಗೆ ಧಿಕ್ಕಾರ ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಆಪ್ತ ಸಹಾಯಕ ನಿಮ್ಮ ಮನವಿಯನ್ನು ಸ್ವೀಕರಿಸಿ ಸಂಸದರಿಗೆ ತಲುಪಿಸುತ್ತೇನೆ ಎಂದು ಮನವಿ ಮಾಡಿಕೊಂಡರು ನಂತರ ಅವರಿಗೆ ಎಚ್ಚರಿಕೆ ನೀಡಿ ರೈತರ ಒತ್ತಾಯ ಪತ್ರವನ್ನು ಪ್ರಧಾನ ಮಂತ್ರಿಗಳ ಗಮನಕ್ಕೆ ತುರ್ತಾಗಿ ತಲುಪಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಪಂಜಾಬ್ ಹರಿಯಾಣ ರಾಜ್ಯಗಳ ರೈತರ ಮೇಲೆ ಪೊಲೀಸ್ ದೌರ್ಜನ್ಯ ನಿಲ್ಲಲಿ, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಲಿ. ದೇಶದ ರೈತರ ಪರವಾಗಿ ಹೋರಾಟ ಮಾಡುತ್ತಿರುವ ಪಂಜಾಬ್ ಹರಿಯಾಣ ರಾಜ್ಯಗಳ ರೈತರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ಸಂಘಟನೆಯ ರೈತರ ಮೇಲೆ ಕೇಂದ್ರ ಸರ್ಕಾರ ಪೊಲೀಸ್ ದೌರ್ಜನ್ಯ ಮೂಲಕ ರೈತರ ಕೊಲೆ ಮಾಡುತ್ತಿದೆ, ಮಾನವ ಹಕ್ಕು ದಮನ ಮಾಡುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚಳುವಳಿ ಮಾಡಲು ದೆಹಲಿಗೆ ಬರುತ್ತಿದ್ದ ರೈತರನ್ನ ದೆಹಲಿ ಗಡಿಭಾಗದಲ್ಲಿ ಉಗ್ರಗಾಮಿಗಳನ್ನ ವಿದೇಶಿ  ಶಕ್ತಿಗಳನ್ನು ನಿಗ್ರಹಿಸುವ ರೀತಿಯಲ್ಲಿ ದೇಶದ ರೈತರನ್ನ ಬಗ್ಗು ಬಡಿಯಲು ವಾಮ ಮಾರ್ಗದ ಮೂಲಕ ಅವಮಾನಿಸುತ್ತಿದೆ. ಇದು ಖಂಡನೀಯ ಪೊಲೀಸರ ದಾಳಿಯಿಂದ ರೈತರು ಸಾಯುತ್ತಿದ್ದಾರೆ ಇದು ಕೂಡಲೇ ನಿಲ್ಲಬೇಕು, ಅಧಿಕಾರ ಬಲದಿಂದ ರೈತರ ಚಳುವಳಿಯನ್ನು ನಾಶ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ 70 ರಷ್ಟು ರೈತರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ನಾವು ಸರ್ಕಾರದ ಬಿಕ್ಷೆ ಕೇಳುತ್ತಿಲ್ಲ ನ್ಯಾಯ ಕೇಳುತ್ತಿದ್ದೇವೆ ಈಗಲೇ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಇಡೀ ದೇಶದ ರೈತರು ಬೀದಿ ಬೀದಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ನಿಮ್ಮ ಮಂತ್ರಿಗಳಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.

ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಶಾಸನ ಜಾರಿ ಆಗಲೇಬೇಕು, ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಲೇಬೇಕು, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು, ಭಾರತ ಸರ್ಕಾರ ಡಬ್ಲ್ಯೂ ಟಿ ಓ ಒಪ್ಪಂದದಿಂದ ಹೊರಬರಬೇಕು, ಫಸಲ್ ಭೀಮಾ ಬೆಳೆ ಯೋಜನೆ ಪದ್ಧತಿ ಬದಲಾಗಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿಯಾಗಬೇಕು, ಕಳೆದ ಒಂದುವರೆ ವರ್ಷ ದೆಹಲಿ ಗಡಿಯಲ್ಲಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡ 750 ರೈತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ದೊರೆಯಲೇಬೇಕು ಎಲ್ಲ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಕರ್ನಾಟಕ ರಾಜ್ಯದ ರೈತರು ನಾವು ಸದಾ ದೆಹಲಿ ಹೋರಾಟದ ಜೊತೆಯಲ್ಲಿ ಬೆಂಬಲವಾಗಿ ಭಾಗವಹಿಸುತ್ತೇವೆ ನಾವು ಯಾರು ಹೇಡಿಗಳಲ್ಲ, ನಾವು ಯಾರು ದೇಶದ್ರೋಹಿಗಳು ಅಲ್ಲ. ರೈತರ ಕೆಣಕಿ ಉಳಿದವರಿಲ್ಲ ಎಂಬುದನ್ನು ಅರಿತುಕೊಳ್ಳಿ. ಇದು ನಮ್ಮ ಎಚ್ಚರಿಕೆ ಸಂದೇಶ ಮುಂದೆ ಚುನಾವಣೆ ಸಮಯದಲ್ಲಿ ನಮ್ಮ ಹಳ್ಳಿಗಳಿಗೆ ಬಂದರೆ ಮುಖಕ್ಕೆ ಸಗಣಿ ಎರಚುವ ಕೆಲಸ ಮಾಡಿ ಸೋಲಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ , ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ಮುಖಂಡರಾದ ಹೆಗ್ಗೂರು ರಂಗರಾಜ್, ಅಂಬಳೆ ಮಂಜುನಾಥ್,  ಕಾಟೂರು ಮಾದೇವಸ್ವಾಮಿ, ಶ್ರೀಕಂಠ, ಚುಂಚುರಾಯನಹುಂಡಿ ಗಿರೀಶ್, ಸಿದ್ದರಾಮ, ಕೂಡನಹಳ್ಳಿ ಸೋಮಣ್ಣ, ಗಣೇಶ್, ಮಾರ್ಬಳ್ಳಿ ಬಸವರಾಜು, ಹಿರೇನಂದಿ ಮಹಾದೇವಪ್ಪ, ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ, ಮಹೇಶ್, ಕರುವಟ್ಟಿ ಉಮೇಶ್, ಯಾಕ ನೂರು ಚಂದ್ರ, ಮಲ್ಲೇಶ್,  ಕುಪ್ಪೆ ಮಾದೇವ ಸೇರಿ ಸುಮಾರು ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.