ಮನೆ ರಾಜ್ಯ ವಿದ್ಯಾರ್ಥಿಗಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನೆಯನ್ನು ಬೆಳೆಸುವ ನಿಟ್ಟಿನಲ್ಲಿ ನೆಹರು ಸ್ಟ್ರೀಮ್‌ ಲ್ಯಾಬ್‌ ಸ್ಥಾಪನೆಗೆ ಚಿಂತನೆ:...

ವಿದ್ಯಾರ್ಥಿಗಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನೆಯನ್ನು ಬೆಳೆಸುವ ನಿಟ್ಟಿನಲ್ಲಿ ನೆಹರು ಸ್ಟ್ರೀಮ್‌ ಲ್ಯಾಬ್‌ ಸ್ಥಾಪನೆಗೆ ಚಿಂತನೆ: ಸಚಿವ ಎನ್‌ ಎಸ್‌ ಭೋಸರಾಜು

0

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ನೂತನ ಕೌಶಲ್ಯಗಳನ್ನು ಕಲಿಸುವ ಉದ್ದೇಶದಿಂದ ಹಾಗೂ ಸಂಶೋಧನೆ, ಪ್ರಾಯೋಗಿಕ ಕಲಿಕೆಗೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ನೆಹರು ಸ್ಟ್ರೀಮ್‌ (STREAM) ಲ್ಯಾಬ್‌ಗಳ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಹೇಳಿದರು.

ಇಂದು ಜವಾಹರಲಾಲ್‌ ನೆಹರು ತಾರಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯುವ ಮನಸ್ಸುಗಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನೆಯನ್ನು ಬೆಳೆಸುವುದು ನೆಹರು ಸ್ಟ್ರೀಮ್‌ (STREAM) ಲ್ಯಾಬ್‌ ನ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗಿರಲು ಅವರನ್ನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಯೋಗಿಕವಾಗಿ ಚರ್ಚಿಸುವಂತೆ, ಸಂಶೋಧಿಸುವಂತೆ ಹಾಗೂ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಬೇಕು. ಈ ಲ್ಯಾಬ್‌ಗಳಲ್ಲಿ ಇದಕ್ಕೆ ಪೂರಕವಾದ ಪರಿಸರವನ್ನು ಅಳವಡಿಸಲಾಗುವುದು. 21 ನೇ ಶತಮಾನದ ಕೌಶಲ್ಯಗಳ ಕಲಿಕೆಗೆ ಅನುವು ಮಾಡಿಕೊಡುವ ಪಠ್ಯಕ್ರಮವನ್ನು ಇದರಲ್ಲಿ ಅಳವಡಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಸಚಿವರು ತಿಳಿಸಿದರು.

ನೆಹರು ಸ್ಟ್ರೀಮ್‌ ಲ್ಯಾಬ್‌ ಒಂದು ಪ್ರಯೋಗಾಲಯ ಸ್ಥಳವಾಗಿರಲಿದೆ. ಯುವ ಮನಸ್ಸುಗಳು ಹೊಸ ಕೌಶಲ್ಯಗಳನ್ನು ಕಲಿಯುವ ನಿಟ್ಟಿನಲ್ಲಿ ಡೂ ಇಟ್‌ ಯುವರ್‌ ಸೆಲ್ಫ್‌ ಪ್ರಯೋಗಗಳ ಮೂಲಕ ಅನುಭವ ಹೆಚ್ಚಿಸಿಕೊಳ್ಳುವ ಅವಕಾಶವನ್ನು ಒದಗಿಸಲಿದೆ. ಸ್ಟ್ರೀಮ್ (STREAM) (ವಿಜ್ಞಾನ, ತಂತ್ರಜ್ಞಾನ, ರೊಬೊಟಿಕ್ಸ್, ಪರಿಸರ ಮತ್ತು ಪರಿಸರ ವಿಜ್ಞಾನ, ಖಗೋಳಶಾಸ್ತ್ರ ಮತ್ತು ಗಣಿತ) ಪರಿಕಲ್ಪನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಉಪಕರಣಗಳು ಮತ್ತು ಸಲಕರಣೆಗಳೊಂದಿಗೆ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.

ವಿಧಾನ ಪರಿಷತ್‌ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಭಾರತದ ವಿಜ್ಞಾನ ಕ್ಷೇತ್ರದ ಸಾಧನೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಸಿ.ವಿ ರಾಮನ್‌. ಶಾಲಾ ಮಕ್ಕಳು ಇವರಂತೆ ಸಾಧನೆ ಮಾಡಲು ಮುಂದಾಗಬೇಕು. ಪಾಲಕರು ತಮ್ಮ ಮಕ್ಕಳ‌ ಭವಿಷ್ಯ ರೂಪಿಸಲು ತ್ಯಾಗ ಮಾಡುತ್ತಾರೆ. ಅವರ ತ್ಯಾಗಕ್ಕೆ ತಕ್ಕಂತಹ ಸಾಧನೆಯನ್ನು ಮಾಡುವತ್ತ ಗಮನ ಹರಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾಗ ಶಾಲಾ ಮಕ್ಕಳಿಗೆ ವಿಜ್ಞಾನ ಅಕಾಡೆಮಿ ಸ್ಥಾಪಿಸಿದ್ದನ್ನ ನೆನೆಪಿಸಿಕೊಂಡ ಅವರು ಇನ್ನಷ್ಟು ವಿಜ್ಞಾನಿಗಳು ಉದಯಿಸಲಿ ಎಂದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್‌ ಮಾತನಾಡಿ, ವಿಜ್ಞಾನ ಇಲ್ಲದಿದ್ದರೆ ಪ್ರಪಂಚ ಇಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಎರಡು ಮುಖ್ಯ. ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಸರ್. ಸಿ.ವಿ. ರಾಮನ್ ಒಳ್ಳೆಯ ಹೆಸರು ಮಾಡಿದ್ದಾರೆ. ಪ್ರಪಂಚದಲ್ಲಿ ಎಲ್ಲರೂ ಅವರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಜಿಲ್ಲಾ ಕೇಂಧ್ರಗಳಲ್ಲಿ ವಿಜ್ಞಾನ ಕೇಂದ್ರಗಳು ಪ್ರಾರಂಭವಾದಾಗ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ತೊಡಗಿಕೊಂಡಿದೆ ಎಂದರು.

ಪ್ರಾಥಮಿಕ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರು ಮಾತನಾಡಿ,  ನಮ್ಮ ಇಲಾಖೇಯ ವ್ಯಾಪ್ತಿಯಲ್ಲಿ 66 ಸಾವಿರ ಶಾಲೆಗಳಲ್ಲಿ 60 ಲಕ್ಷ ಮಕ್ಕಳು‌ ಬರುತ್ತಾರೆ. ಮಕ್ಕಳಿಗೆ ಸೂಕ್ತ ಸಹಕಾರ ನೀಡುವುದು ಸರ್ಕಾರ ಅಥವಾ ಪಾಲಕರ ಜವಾಬ್ದಾರಿ.  ಮಕ್ಕಳಿಗಾಗಿ ಶಾಲೆಗಳಲ್ಲಿ ಟಿಕಂರಿಂಗ್ ಲ್ಯಾಬ್  ಸ್ಥಾಪಿಸುತ್ತಿದ್ದು, ರಾಜ್ಯದ ಎಲ್ಲ‌ ಶಾಲೆಗಳಿಗೆ ಉಚಿತ ವಾಗಿ ವಿದ್ಯುತ್ ಮತ್ತು ಕುಡಿಯುವ ನೀರು ಒದಗಿಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಇದರ ಸದ್ಬಳಕೆ ‌ಮಾಡಿಕೊಂಡು ಒಳ್ಳೆಯ ಪ್ರಜೆಗಳಾಗಿ ಎಂದು ಕರೆ ನೀಡಿದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ಮಾತನಾಡಿ, ದೇಶದಲ್ಲಿ  ವಿಜ್ಞಾನ  ಬೆಳೆಯಲು ಪ್ರಧಾನಿ ನೆಹರು ಅವರು ಹೆಚ್ಚು ಒತ್ತನ್ನ ಹಾಗೂ ಪ್ರೇರಣೆ ಕೊಟ್ಟಿದ್ದರು. ಶಾಲಾ ಮಕ್ಕಳು  ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ವೈಚಾರಿಕತೆ ಬಂದರೆ ಹಾಗೂ ತಾರ್ಕಿಕ ಯೋಚನೆ ಬೆಳೆಸಿಕೊಂಡರೆ ಮೂಡನಂಬಿಕೆಯಿಂದ ಹೊರಬಹುದು ಎಂದು ಹೇಳೀದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.

ಕಾರ್ಯಕ್ರಮದಲ್ಲಿ ಐಟಿ,ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಏಕ್‌ರೂಪ್‌ ಕೌರ್‌, ಕೆಸ್ಟೆಪ್ಸ್‌ ವ್ಯವಸ್ಥಾಪಕ ನಿರ್ದೇಶಕ ಪವನ್‌ ಕುಮಾರ್‌ ಮಾಲಪಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.