ಬೆಂಗಳೂರು: ರಾಜ್ಯದ ಎಲ್ಲಾ ಮಳಿಗೆಗಳಿಗೆ ಅಳವಡಿಸುವ ಬೋರ್ಡ್ ಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಎಂಬ ನಿಯಮ ಜಾರಿಯಾಗಿದ್ದು, ಬೋರ್ಡ್ ಬದಲಾವಣೆಗೆ ನೀಡಲಾಗಿದ್ದ ಗಡುವು ಮುಕ್ತಾಯಗೊಂಡಿದೆ. ಆದರೆ ವ್ಯಾಪಾರಸ್ತರು ಹಾಗೂ ಕಂಪನಿಗಳ ಮನವಿ ಮೇರೆಗೆ ಶೇ.60 ರಷ್ಟು ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಎರಡು ವಾರಗಳ ಕಾಲವಕಾಶ ನೀಡಲಾಗಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದಕಡೆ ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ ಕಾಲ ವಿಸ್ತರಿಸಲಾಗಿದೆ ಎಂದರು.
ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿಹಿಡಿಯುವುದು ಅತಿ ಮುಖ್ಯ. 2 ವಾರಗಳ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕನ್ನಡ ನಾಮಫಲಕ ಹಾಕದಿದ್ದರೆ ಅಂಗಡಿಗಳನ್ನು ಬಂದ್ ಮಾಡುತ್ತೇವೆ. ಈಗಾಗಲೇ ಶೇಕಡಾ 90ರಷ್ಟು ಕನ್ನಡ ನಾಮಫಲಕ ಹಾಕಲಾಗಿದೆ. ಇನ್ನು ಉಳಿದಿರುವುದು 3 ಸಾವಿರ ನಾಮಫಲಕ ಮಾತ್ರ. ಮತ್ತಷ್ಟು ಸಮಯ ನೀಡುವಂತೆ ಅಂತಾರಾಷ್ಟ್ರೀಯ ಕಂಪನಿಗಳು, SBI, ಕೆನರಾ ಬ್ಯಾಂಕ್ ಮನವಿ ನೀಡಿವೆ. ಈ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದರು.
ಡೆಡ್ ಲೈನ್ ಮುಕ್ತಾಯ ಹಿನ್ನೆಲೆ ಇಂದು ನಾಮಫಲಕ ಪರಿಶೀಲನೆ ನಡೆಸಲು ಮುಂದಾದ ಪಾಲಿಕೆ ಅಧಿಕಾರಿಗಳು, ಶೇಕಡಾ 60ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ಪರವಾನಗಿ ರದ್ದು ಮಾಡಿ ಬೀಗ ಜಡಿಯುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ.