ಮನೆ ರಾಜ್ಯ ಸಕ್ಕರೆ ಕಾರ್ಖಾನೆಗಳಿಂದ 1435 ಕೋಟಿ ರೂ. ಬಾಕಿ ಹಣ ಪಾವತಿಗೆ ಕ್ರಮ: ಸಚಿಚ ಮುನೇನಕೊಪ್ಪ

ಸಕ್ಕರೆ ಕಾರ್ಖಾನೆಗಳಿಂದ 1435 ಕೋಟಿ ರೂ. ಬಾಕಿ ಹಣ ಪಾವತಿಗೆ ಕ್ರಮ: ಸಚಿಚ ಮುನೇನಕೊಪ್ಪ

0

ಬೆಂಗಳೂರು (Bengaluru)- ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಿದ್ದ 1435 ಕೋಟಿ ರೂ. ಬಾಕಿ ಹಣವನ್ನು ನೀಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಹೇಳಿದ್ದಾರೆ.
ಇಂದು ವಿಕಾಸಸೌಧದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇಂದು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ಬಾಕಿ ಹಣ ನೀಡುವ ಕುರಿತು ಚರ್ಚೆ ನಡೆಸಿದ್ದೇವೆ. ಕಳೆದ ವರ್ಷ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತರಿಗೆ ಬಾಕಿ ಹಣ ನೀಡಿದ್ದರು. ಈ ವರ್ಷ ಇನ್ನೂ ಕಬ್ಬು ಕಟಾವು ನಡೆದಿದೆ. ರಾಜ್ಯದಲ್ಲಿ 621.93 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. 19626 ಕೋಟಿ ರೂ. ರೈತರಿಗೆ ಕೊಡಿಸಬೇಕಿದೆ. 18224 ಕೋಟಿ ರೂ. ಈಗಾಗಲೇ ಪಾವತಿ ಮಾಡುವ ಕೆಲಸ ಮಾಡಲಾಗಿದೆ. ಸರ್ಕಾರ ಸೂಚನೆ ಕೊಟ್ಟ ನಂತರ 400 ಕೋಟಿ ಕೊಟ್ಟಿದ್ದಾರೆ. ಶೇ 93 ರಷ್ಟು ಹಣ ನೀಡಿದ್ದಾರೆ. ಬಾಕಿ ಶೇ. 7 ಹಣವನ್ನು ಈ ತಿಂಗಳ ಅಂತ್ಯದೊಳಗೆ ನೀಡುವಂತೆ ಸೂಚಿಸಿದ್ದೇವೆ. 1435 ಕೋಟಿ ಬಾಕಿ ಉಳಿದಿದೆ. ಇಂದಿನ ಸಭೆಯಲ್ಲಿ 200 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಎಂದು ವಿವರ ನೀಡಿದರು.

ನಾವು ಮುಂಜಾಗ್ರತ ಕ್ರಮವಾಗಿ ಈಗಲೇ ಕ್ರಮ ವಹಿಸಿದ್ದರಿಂದ ರಾಜ್ಯದ ರೈತರು ಬೀದಿಗಿಳಿಯದಂತೆ ನೋಡಿಕೊಳ್ಳಲಾಗಿದೆ. ಮೂರ್ನಾಲ್ಕು ಕಾರ್ಖಾನೆಗಳು ಶೇ.100 ರಷ್ಟು ಹಣ ಸಂದಾಯ ಮಾಡಿದ್ದಾರೆ. ರಾಜ್ಯದಲ್ಲಿ ಎಥೆನಾಲ್ ಗೆ 32 ಸಕ್ಕರೆ ಕಾರ್ಖಾನೆಗಳು ಆರಂಭಿಸಿವೆ. ಕೇಂದ್ರದಿಂದ 68 ಘಟಕಗಳು ಅನುಮತಿ ಪಡೆದಿವೆ. ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು 50 ಕೋಟಿ ನೀಡಲಾಗಿದೆ. ಬಾಗಲಕೋಟೆಯ ರನ್ನ ಕಾರ್ಖಾನೆಯನ್ನು ನಿರ್ವಹಿಸಲು ಖಾಸಗಿಯವರು ಮುಂದೆ ಬಂದಿದ್ದಾರೆ. ಮೈಸೂರಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಹಿಂದಿನ ವರ್ಷಗಳದ್ದು 11.58.ಕೋಟಿ ರೂ. ಬಾಕಿ ಇದೆ. ಕಾರ್ಖಾನೆ ಮಾಲೀಕರು ಇಳುವರಿ ಆಧಾರದಲ್ಲಿ ರೈತರಿಗೆ ಹೆಚ್ಚಿನ ಹಣ ಕೊಡಿಸಲು ತಂಡ ರಚನೆ ಮಾಡಲಾಗಿದ್ದು, ವರದಿ ಪಡೆಯಲಾಗಿದೆ. ನಿರಾಣಿ ಅವರ ಕಾರ್ಖಾನೆ ಬಾಕಿ ಇದೆ. ಅವರ ಪುತ್ರ ಸಭೆಗೆ ಆಗಮಿಸಿದ್ದರು. 40 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಎಥೆನಾಲ್ ನೀತಿ ಜಾರಿಗೊಳಿಸಲಾಗಿದೆ. ಎಥೆನಾಲ್ ಉತ್ಪಾದನೆಯಿಂದ ರೈತರಿಗೆ ಪಾಲು ನೀಡುವ ಬಗ್ಗೆ ಸಕ್ಕರೆ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಮೈಶುಗರ್ ಕಾರ್ಖಾನೆಗೆ 528 ಕೋಟಿ ರೂ. ನೀಡಲಾಗಿದೆ. ಅದರಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಂಕರ್ ಪಾಟೀಲ್‌ ಮುನೇನಕೊಪ್ಪ ಹೇಳಿದ್ದಾರೆ.