ಮನೆ ರಾಜ್ಯ ಲೋಕಸಭಾ ಚುನಾವಣೆ: ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಪಟ್ಟಿ ಅಂತಿಮ- ಬಿ.ಎಸ್.ಯಡಿಯೂರಪ್ಪ

ಲೋಕಸಭಾ ಚುನಾವಣೆ: ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಪಟ್ಟಿ ಅಂತಿಮ- ಬಿ.ಎಸ್.ಯಡಿಯೂರಪ್ಪ

0

ಶಿವಮೊಗ್ಗ: ಲೋಕಸಭಾ ಟಿಕೆಟ್ ಹಂಚಿಕೆ ಬಗ್ಗೆ ದೆಹಲಿಯಲ್ಲಿ ನಾಡಿದ್ದು ಸಭೆಯಿದೆ. ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಪಟ್ಟಿ ಅಂತಿಮವಾಗಲಿದೆ. 28 ಕ್ಷೇತ್ರಗಳ ಪಟ್ಟಿ ಬಹುತೇಕ ಫೈನಲ್ ಆಗಬಹುದು. ಎಲ್ಲಾ ಕ್ಷೇತ್ರದ ಪಟ್ಟಿ ಫೈನಲ್ ಆಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಬರಿಗೆ ಆದ್ಯತೆ ವಿಚಾರವಾಗಿ ದೆಹಲಿ ನಾಯಕರ ‌ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಅವರ ತೀರ್ಮಾನವೇ ಅಂತಿಮ. ಬಿಜೆಪಿ – ಜೆಡಿಎಸ್ ಹೊಂದಾಣಿಕೆ ನಿಶ್ಚಿತ. ಆದರೆ ಸ್ಥಾನದ ಬಗ್ಗೆ ಅಂತಿಮವಾಗಿಲ್ಲ. ಮಂಡ್ಯದಿಂದ ಸುಮಲತಾ ಸ್ಪರ್ಧೆ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿಯಿಲ್ಲ ಎಂದರು.

ಗೋ ಬ್ಯಾಕ್ ಶೋಭ ಕರಂದ್ಲಾಜೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕೆ ಯಾವುದೇ ಅರ್ಥ ಇಲ್ಲ. ಅವರ ಒಳ್ಳೆಯ ಕೆಲಸ ಮಾಡುವುದನ್ನು ಸಹಿಸದೆ ಕೆಲವರು ಈ ರೀತಿ ಮಾಡಿದ್ದಾರೆ. ಇದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.

ಎಫ್ಎಸ್ಎಲ್ ವರದಿ ವಿಚಾರಕ್ಕೆ ಮಾತನಾಡಿ, ಎಫ್ ಎಸ್ ಎಲ್ ವರದಿ ತಕ್ಷಣ ಬಿಡುಗಡೆಗೊಳಿಸಿ ವರದಿಯನ್ನು ಯಾಕೆ ಬಚ್ಚಿಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಎಫ್ಎಸ್ಎಲ್ ವರದಿ ಬಹಿರಂಗಗೊಳಿಸಿ. ವಾಸ್ತವಿಕ ಸಂಗತಿ ದೇಶ ಹಾಗು ರಾಜ್ಯದ ಜನರಿಗೆ ಗೊತ್ತಾಗಬೇಕು. ವಿಳಂಬವಾದರೆ ಕ್ರಮ ಕೈಗೊಳ್ಳಲು ವಿಳಂಬವಾಗುತ್ತದೆ ಎಂದರು.

ನೀರಿಗೆ ಹಾಹಾಕಾರ ವಿಚಾರವಾಗಿ ಮಾತನಾಡಿ, ರಾಜ್ಯಾದ್ಯಂತ ಬರ ಹಾಗು ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ನೀರು ದುಡ್ಡು ಕೊಟ್ಟು ಕುಡಿಯುವ ಪರಿಸ್ಥಿತಿ ಉಂಟಾಗಿದೆ. ಆದಷ್ಟು ಬೇಗ ಮಳೆ ಬಂದು ಕೆರೆಕಟ್ಟೆ ತುಂಬಿ ಪರಿಸ್ಥಿತಿ ದೂರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರ ಕ್ರಮ ವಹಿಸಬೇಕು ಎಂದರು.

ಶರಣ ಪ್ರಕಾಶ್ ಪಾಟೀಲ್ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ನಾನು ಪ್ರತಿಕ್ರಿಯೆ ‌ನೀಡುವುದಿಲ್ಲ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.