ಮನೆ ಕಾನೂನು ಜೀವನಾಂಶ ಕೋರಿಕೆ ಸಂದರ್ಭದಲ್ಲಿ ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸುವಂತಿಲ್ಲ: ಹೈಕೋರ್ಟ್

ಜೀವನಾಂಶ ಕೋರಿಕೆ ಸಂದರ್ಭದಲ್ಲಿ ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸುವಂತಿಲ್ಲ: ಹೈಕೋರ್ಟ್

0

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿ ಸಂದರ್ಭದಲ್ಲಿ ನ್ಯಾಯಾಲಯಗಳು ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ಆದೇಶ ಮಾಡಿದೆ.

Join Our Whatsapp Group

ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ನೇತೃತ್ವದ ಏಸಕದಸ್ಯ ಪೀಠವು ನಡೆಸಿತು.

ಸಾಕ್ಷಿಗಳ ಹೇಳಿಕೆ ಮತ್ತು ಇತರೆ ಸಾಕ್ಷ್ಯಧಾರ ಪರಿಗಣಿಸಿದರೆ ಸೌಮ್ಯ (ಹೆಸರು ಬದಲಿಸಲಾಗಿದೆ) ಅವರನ್ನು ರವಿ (ಹೆಸರು ಬದಲಿಸಲಾಗಿದೆ) ಮದುವೆಯಾಗಿರುವುದು ಸ್ಪಷ್ಟವಾಗುತ್ತದೆ. ಮದುವೆ ಸಿಂಧುತ್ವದ ಬಗ್ಗೆ ಅರ್ಜಿ ಸಲ್ಲಿಸಿದ್ದರೆ ಮಾತ್ರ ಆ ಕುರಿತು ಸತ್ರ ನ್ಯಾಯಾಲಯವು ಪರಿಶೀಲನೆ ನಡೆಸಿ, ಆದೇಶ ಹೊರಡಿಸಬೇಕಾಗುತ್ತದೆ. ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯಗಳು ಮದುವೆ ಸಿಂಧುತ್ವದ ಬಗ್ಗೆ ಪರಿಶೀಲನೆ ನಡೆಸುವಂತಿಲ್ಲ. ಪತಿಯಿಂದ ಪತ್ನಿ ಜೀವನಾಂಶ ಪಡೆಯಲು ಅರ್ಹರಾಗಿದ್ದಾರೆಯೇ ಎಂಬುದರ ಕುರಿತು ಆಕೆಯ ಸಾಕ್ಷ್ಯ ಪರಿಶೀಲನಾ ಮೇಲ್ಮನವಿಯನ್ನು ವಿಚಾರಣೆ ನಡೆಸಲು (ಸತ್ರ) ನ್ಯಾಯಾಲಯಕ್ಕೆ ಅವಕಾಶವಿರುತ್ತದೆ. ಅಲ್ಲದೇ, ಒಮ್ಮೆ ವಿಚಾರಣಾಧೀನ ನ್ಯಾಯಾಲಯ (ಜೆಎಂಎಫ್ಸಿ) ಜೀವನಾಂಶ ನೀಡುವ ಬಗ್ಗೆ ಸಾಕ್ಷ್ಯಾಧಾರ ಪರಿಗಣಿಸಿ ಆದೇಶ ಪ್ರಕಟಿಸಿದಾಗ, ಪತ್ನಿ ಸ್ವತಃ ಜೀವನ ನಿರ್ವಹಣೆ ಮಾಡಲು ಸಮರ್ಥಳು ಎಂಬುದು ಸಾಬೀತಾದರೆ ಜೀವನಾಂಶ ನೀಡಲು ಸೂಚಿಸಿ ಹೊರಡಿಸಿದ ಆದೇಶವನ್ನು ಮೇಲ್ಮನವಿ ನ್ಯಾಯಾಲಯವು (ಸತ್ರ) ತಿದ್ದುಪಡಿ ಮಾಡಬಹುದು, ಇಲ್ಲವೇ ರದ್ದುಪಡಿಸಬಹುದು. ಆದರೆ, ಮದುವೆಯ ಸಿಂಧುತ್ವದ ಬಗ್ಗೆ ಯಾವುದೇ ಆದೇಶ ಪ್ರಕಟಿಸಿದರೆ, ಅದು ತನ್ನ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಂತಾಗುತ್ತದೆ. ಹೀಗಾಗಿ, ಹಾಲಿ ಪ್ರಕರಣದಲ್ಲಿ ಸತ್ರ ನ್ಯಾಯಾಲಯ ಅಧಿಕಾರ ವ್ಯಾಪ್ತಿ ಮೀರಿ ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸಿರುವುದು ಸರಿಯಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಮುಂದುವರೆದು, ಜೀವನಾಂಶ ಪಾವತಿ ಕುರಿತಂತೆ ವಿಚಾರಣಾ ನ್ಯಾಯಾಲಯ (ಜೆಎಂಎಫ್ ಸಿ) ಹೊರಡಿಸಿದ ಆದೇಶ ರದ್ದತಿಯೂ ನ್ಯಾಯಸಮ್ಮತವಲ್ಲ ಎಂದಿರುವ ಹೈಕೋರ್ಟ್ ಸತ್ರ ನ್ಯಾಯಾಲಯದ ಆದೇಶ ರದ್ದುಪಡಿಸಿದ್ದು, ಜೆಎಂಎಫ್ಸಿ ಆದೇಶವನ್ನು ಕಾಯಂಗೊಳಿಸಿದೆ.

ಸೌಮ್ಯ ಪರ ವಕೀಲರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿ ಮೀರಿ ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸಿದೆ. ಸೌಮ್ಯ ಮತದಾನ ಗುರುತಿನ ಚೀಟಿ ಹೊಂದಿದ್ದು, ಅದರಿಂದ ರವಿಯೇ ಆಕೆಯ ಪತಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆ ಗುರುತಿನ ಚೀಟಿಯನ್ನು ಸೌಮ್ಯ ಮೋಸದಿಂದ ಪಡೆದುಕೊಂಡಿಲ್ಲ. ಪ್ರಕರಣದಲ್ಲಿ ಸೌಮ್ಯ ಸಂಬಂಧಿಕರಾದ ಚಂದಪ್ಪ ಬಿರಾದಾರ್ ವಿವಾಹ ನಡೆಸಿಕೊಟ್ಟಿದ್ದು, ದಂಪತಿಯ (ರವಿ ಮತ್ತು ಸೌಮ್ಯ) ಸಂಬಂಧ ದೃಢಪಡಿಸಿದ್ದಾರೆ. ಹೀಗಿದ್ದರೂ ಸತ್ರ ನ್ಯಾಯಾಲಯದ ಆದೇಶವು ಅಧಿಕಾರ ವ್ಯಾಪ್ತಿ ಮೀರಿ ಮದುವೆ ಸಿಂಧುತ್ವದ ಬಗ್ಗೆ ನಿರ್ಧರಿಸಿದೆ. ಆ ಆದೇಶವು ದೋಷಪೂರಿತವಾಗಿದ್ದು, ರದ್ದುಪಡಿಸಲು ಅರ್ಹವಾಗಿದೆ ಎಂದು ಪ್ರತಿಪಾದಿಸಿದ್ದರು.

ರವಿ ಪರ ವಕೀಲರು, ಸತ್ರ ನ್ಯಾಯಾಲಯದ ಆದೇಶ ಸೂಕ್ತವಾಗಿದೆ. ಸಾಕ್ಷಿಗಳ ಹೇಳಿಕೆಗಳು ಗೊಂದಲಕಾರಿ ಮತ್ತು ತದ್ವಿರುದ್ಧವಾಗಿದೆ. ರವಿಯನ್ನು ಕಾನೂನಾತ್ಮಕವಾಗಿ ವಿವಾಹವಾಗಿರುವುದನ್ನು ಸಾಬೀತುಪಡಿಸುವಲ್ಲಿ ಸೌಮ್ಯ ವಿಫಲವಾಗಿದ್ದಾರೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ರವಿ ಮತ್ತು ಸೌಮ್ಯ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. 2013ರಲ್ಲಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸೌಮ್ಯ ಅವರು ಮದುವೆ ಸಂದರ್ಭದಲ್ಲಿ ಪತಿಗೆ ತಮ್ಮ ಪೋಷಕರು ವರದಕ್ಷಿಣೆಯಾಗಿ ಹಣ ಮತ್ತು ಚಿನ್ನಾಭರಣ ನೀಡಿದ್ದರು. ಅದರ ಹೊರತಾಗಿಯೂ ಪತಿಯು ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಡುತ್ತಾ ಕಿರುಕುಳ ನೀಡುತ್ತಿದ್ದರು. ಹಲವು ದಿನ ಉಪಾಹಾರ ಸಹ ನೀಡಿಲ್ಲ. ತಾಯಿ ಮತ್ತು ಸಹೋದರಿಯ ಪ್ರಚೋದನೆಯಿಂದ ಪತಿಯು ತನ್ನನ್ನು ಮನೆಯಿಂದ ಹೊರ ಹಾಕಿದ್ದರು. ಇದರಿಂದ ಜೀವನಾಂಶ ನೀಡಲು ಪತಿಗೆ ನಿರ್ದೇಶಿಸುವಂತೆ ಕೋರಿ ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆ ರಕ್ಷಣೆ ಕಾಯಿದೆಯ ಸೆಕ್ಷನ್ 12ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ವಿಜಯಪುರ ಜೆಎಂಎಫ್ಸಿ ನ್ಯಾಯಾಲಯವು ಪತ್ನಿಗೆ ಮಾಸಿಕ ಮೂರು ಸಾವಿರ ರೂಪಾಯಿ ಜೀವನಾಂಶ ಪಾವತಿಸುವಂತೆ ರವಿಗೆ 2016ರ ಅಕ್ಟೋಬರ್ 26ರಂದು ನಿರ್ದೇಶಿಸಿತ್ತು. ಈ ಆದೇಶ ರದ್ದು ಕೋರಿ ರವಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯ ವಿಚಾರಣೆ ನಡೆಸಿದ್ದ ವಿಜಯಪುರ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ರವಿಯೊಂದಿಗೆ (ಅರ್ಜಿದಾರ) ಕಾನೂನಾತ್ಮಕವಾಗಿ ವಿವಾಹವಾಗಿರುವುದನ್ನು ಸಾಬೀತುಪಡಿಸುವಲ್ಲಿ ಸೌಮ್ಯ ವಿಫಲವಾಗಿದ್ದಾರೆ ಎಂದು 2018ರ ಮೇ 29ರಂದು ತೀರ್ಮಾನಿಸಿ ಜೆಎಂಎಫ್ಸಿ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಸೌಮ್ಯ ಹೈಕೋರ್ಟ್ ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಹಿಂದಿನ ಲೇಖನಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಮಹಿಳೆ ಸಾವು, ಓರ್ವನ ಬಂಧನ
ಮುಂದಿನ ಲೇಖನಪಿಎಸ್‌’ಐ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ