ಮನೆ ರಾಜ್ಯ ಹರ್ಷ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

ಹರ್ಷ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

0

ಬೆಂಗಳೂರು (Bengaluru)-ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 10 ಮಂದಿಯ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಲಾಗಿದೆ.

ಆರೋಪಿಗಳನ್ನು ಇನ್ನೂ ಹೆಚ್ಚಿನ ತನಿಖೆಗೆ ಒಳಪಡಿಸುವ ಅಗತ್ಯವಿರುವುದರಿಂದ ಅವರ ನ್ಯಾಯಾಂಗ ಬಂಧನ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ಹೆಚ್ಚಿಸಬೇಕೆಂದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮಾಡಿದ ಮನವಿಯನ್ನು ವಿಶೇಷ ಕೋರ್ಟ್ ಪುರಸ್ಕರಿಸಿದೆ. 

ಎನ್‌ಐಎ ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶ ಕಸನಪ್ಪ ನಾಯಕ್‌ ವಿಚಾರಣೆ ನಡೆಸಿ, ಎನ್‌ಐಎ ಪರ ವಕೀಲರು ಸಲ್ಲಿಸಿದ ಮನವಿಯನ್ನು ಮಾನ್ಯ ಮಾಡಿದರು. 

ಎನ್‌ಐಎ ಪರ ವಾದ ಮಂಡಿಸಿದ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನಕುಮಾರ್, ಪ್ರಕರಣದಲ್ಲಿ ಈಗಾಗಲೇ ಆರೋಪಿಗಳ ಗುರುತು ಪತ್ತೆಯ ಪೆರೇಡ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದರೆ, ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ.

ಜೊತೆಗೆ ಆರೋಪಿಗಳು ಬಳಸುತ್ತಿದ್ದ ವಿದ್ಯುನ್ಮಾನ ಸಾಧನಗಳು ಮತ್ತು ಸಿಡಿಆರ್ ವಿಶ್ಲೇಷಣೆಯು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇನ್ನೂ ನಡೆಯಬೇಕಿದೆ. ಹಾಗಾಗಿ ತನಿಖೆಗಾಗಿ
ಆರೋಪಿಗಳ ನ್ಯಾಯಾಂಗ ಬಂಧನ ಅಗತ್ಯವಿದೆ ಎಂದರು.