ಮನೆ ರಾಜ್ಯ ಮಾರ್ಚ್ 24 ರಿಂದ 26ರ ವರೆಗೆ ನಮ್ಮ ಬೆಂಗಳೂರು ಹಬ್ಬ

ಮಾರ್ಚ್ 24 ರಿಂದ 26ರ ವರೆಗೆ ನಮ್ಮ ಬೆಂಗಳೂರು ಹಬ್ಬ

0

ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಅವರ ಸಂಸ್ಮರಣೆಯಲ್ಲಿ ಮಾರ್ಚ್ 24 ರಿಂದ 26 ರ ವರೆಗೆ ನಮ್ಮ ಬೆಂಗಳೂರು ಹಬ್ಬ ನಡೆಯಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಇಲ್ಲಿ ಇಂದು ತಿಳಿಸಿದರು.

ರಾಜ್ಯ ಸರ್ಕಾರದ ವತಿಯಿಂದ ನಡೆಯಲಿರುವ ಈ ಹಬ್ಬದಲ್ಲಿ ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ 243  ವಾರ್ಡ್ ಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ಒಳಗೊಂಡಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆದಿದೆ ಎಂದು ವಿಧಾನ ಸೌಧದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಸಚಿವರು ಹೇಳಿದರು.

ವಿಶ್ವದಲ್ಲಿಯೇ ಶರವೇಗದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿರುವ ಉದ್ಯಾನ ನಗರಿಯ ಹಿರಿಮೆ ಗರಿಮೆಯನ್ನು ಜಗತ್ತಿಗೆ ಪರಿಚಯಿಸುವ ಸದುದ್ದೇಶವನ್ನು ಹೊಂದಿರುವ ಈ ಹಬ್ಬದ ಆಯೋಜನೆ ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಅವರಿಗೂ ಗೌರವವನ್ನು ಸೂಚಿಸುವಂತಹುದಾಗಿದೆ ಎಂದು ವಿವರಿಸಿದರು.

ನಮ್ಮ ಬೆಂಗಳೂರು ಹಬ್ಬಕ್ಕೆ ಸಂಬಂಧಿಸಿದಂತೆ ಆಹಾರೋತ್ಸವ, ಸಂಗೀತ ಸಂಗೀತ ಸಂಜೆ, ಚಿತ್ರಕಲಾ ಪ್ರದರ್ಶನ, ವಿಂಟೆಜ್ ಕಾರ್ ಮತ್ತು ಬೈಕ್ ಪ್ರದರ್ಶನ, ಶ್ವಾನ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ.

ನಗರದ ಎಲ್ಲಾ ವಾರ್ಡುಗಳಲ್ಲಿನ ಪ್ರಮುಖ ಉದ್ಯಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಯೋಜಿಸಲಾಗಿದೆ, ಅಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ.

ಪ್ರಮುಖ ಬಟ್ಟೆ ಮತ್ತು ಸಿದ್ಧ ಉಡುಪು ಅಂಗಡಿಗಳಲ್ಲಿ ಹಾಗೂ ಇತರೆ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಗ್ರಾಹಕರಿಗೆ ಸೋಡಿ ಅಥವಾ ರಿಯಾಯಿತಿ ದೊರಕಿಸಿಕೊಡಲು ಮಾತುಕತೆ ನಡೆಯುತ್ತಿದೆ ಎಂದೂ ಸಚಿವರು ತಿಳಿಸಿದರು.

ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್, ಅಬಕಾರಿ ಸಚಿವ ಕೆ ಗೋಪಾಲಯ್ಯ, ತೋಟಗಾರಿಕಾ ಹಾಗೂ ಯೋಜನಾ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಅವರೂ ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏನ್ ಮಂಜುಳಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಯರಾಮ್ ರಾಯಪುರ್, ಬೆಂಗಳೂರು ನಗರ ಪೊಲೀಸ್  ಆಯುಕ್ತ ಪ್ರತಾಪ್ ರೆಡ್ಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್ ಲತಾ  ಅವರೂ ಸೇರಿದಂತೆ ಹಲವು ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಹಿಂದಿನ ಲೇಖನ6ನೇ ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ವನಿತೆಯರ ಬಳಗ
ಮುಂದಿನ ಲೇಖನಹಾಸ್ಯ