ಮನೆ ರಾಜ್ಯ ದುರ್ಬಲರು, ಸಣ್ಣ, ಅತಿ ಸಣ್ಣ ರೈತರಿಗೆ 6 ತಿಂಗಳು ಮೀರದಂತೆ ನ್ಯಾಯದಾನ ಕಲ್ಪಿಸಲು ಸಿವಿಲ್ ಪ್ರಕ್ರಿಯಾ...

ದುರ್ಬಲರು, ಸಣ್ಣ, ಅತಿ ಸಣ್ಣ ರೈತರಿಗೆ 6 ತಿಂಗಳು ಮೀರದಂತೆ ನ್ಯಾಯದಾನ ಕಲ್ಪಿಸಲು ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ 2023 ಜಾರಿ: ಹೆಚ್.ಕೆ.ಪಾಟೀಲ

0

ಬೆಂಗಳೂರು: ಸಿವಿಲ್ ವ್ಯಾಜ್ಯದಲ್ಲಿ ಬಡವರು ಅಥವಾ ಆರ್ಥಿಕವಾಗಿ ದುರ್ಬಲರು ಮತ್ತು ಸಣ್ಣ, ಅತಿ ಸಣ್ಣ ರೈತರಿಗೆ 6 ತಿಂಗಳು ಮೀರದಂತೆ ನ್ಯಾಯದಾನ ಕಲ್ಪಿಸಲು ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಕಾಯ್ದೆ 2023 ಸೋಮವಾರದಿಂದ (ಫೆ.4 ರಂದು) ಜಾರಿಯಾಗಿದೆ.‌

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ, ಬಡವರು, ಸಣ್ಣ ರೈತರಿಗೆ, ಆರ್ಥಿಕವಾಗಿ ದುರ್ಬಲರಿಗೆ ಕೋರ್ಟ್ ​ನಲ್ಲಿ ಸಿವಿಲ್ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಹತ್ತು ವರ್ಷಕ್ಕೂ ಅಧಿಕ ತಿರುಗಾಡುತ್ತಿದ್ದಾರೆ. ಅದರಿಂದ ಅವರು ನ್ಯಾಯದಿಂದ ವಂಚಿತರಾಗುತ್ತಾರೆ. ಸಣ್ಣ ಮತ್ತು ದುರ್ಬಲ ರೈತ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿರುವ ವ್ಯಕ್ತಿಗಳು, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದೀರ್ಘಕಾಲಿಕ ವ್ಯಾಜ್ಯವನ್ನು ಎದುರಿಸಲು ಸುಸ್ಥಿರ ಸಾಮರ್ಥ್ಯ ಹೊಂದಿರುವುದಿಲ್ಲ.   ಅಂಥ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸಲು ಸಿವಿಲ್ ಪ್ರಕ್ರಿಯಾ ಸಂಹಿತೆ, 1908 (1908ರ ಕೇಂದ್ರ ಅಧಿನಿಯಮ 5) ಅನ್ನು ಮತ್ತಷ್ಟು ತಿದ್ದುಪಡಿ ಮಾಡಿ, ಶೀಘ್ರ ನಿಗದಿತ ಕಾಲದಲ್ಲಿ ನ್ಯಾಯದೊಂದಿಗೆ ಕಾರ್ಯಕ್ಷಮತೆಯ ಮೇಲೆ ವಿಲೇವಾರಿ ಮಾಡಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

 ಕರ್ನಾಟಕ ರಾಜ್ಯದಲ್ಲಿ ಬಡವರು, ಸಣ್ಣ, ಅತಿ ಸಣ್ಣ ರೈತರು ಮತ್ತು ದುರ್ಬಲ ವರ್ಗದವರು ಆರ್ಥಿಕವಾಗಿ ಹಿಂದುಳಿದ ವರ್ಗದವರು ನ್ಯಾಯಾಲಯಗಳಲ್ಲಿ ದೀರ್ಘ ಕಾಲದವರೆಗೆ ಪ್ರಕರಣಗಳನ್ನು ನಿರ್ವಹಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ನಿಭಾಯಿಸಲು ಆದ್ಯತೆಯ ಮೆಲೆ ಅಂಥ ಪ್ರಕರಣಗಳ ವಿಚಾರಣೆ, ವಿಲೇವಾರಿಗೆ ಸೂಕ್ತವಾದ ವ್ಯವಸ್ಥೆ ರೂಪಿಸಲಾಗಿದೆ. ಕೆಳ ಹಂತದ ನ್ಯಾಯಾಲಯದಿಂದ ಹಿಡಿದು ಹೈ ಕೋರ್ಟ್​ವರೆಗಿನ ಸಿವಿಲ್ ವ್ಯಾಜ್ಯಗಳಲ್ಲಿ ಆರು ತಿಂಗಳು ಮೀರದಂತೆ ನ್ಯಾಯದಾನ ನೀಡಬೇಕು ಎಂದು ಸಚಿವರು ವಿವರಿಸಿದರು.

ಮಾರ್ಗಸೂಚಿಗಳೇನು?: ಎರಡು ಹೆಕ್ಟೇ‌ರ್ ಒಣಬೇಸಾಯದ ಭೂಮಿ ಅಥವಾ ಒಂದು ಮತ್ತು ನಾಲ್ಕನೇ ಒಂದು ಹೆಕ್ಟೇರ್ ಮಳೆಯಾಶ್ರಿತ ಅರ್ಧ ಭೂಮಿ, ಒಂದು ನೀರಾವರಿ ಬೆಳೆ ಬೆಳೆಯಲು ಅಥವಾ ತೋಟದ ಬೆಳೆಗಳನ್ನು ಬೆಳೆಯಲು, ದಾಕ್ಷಿ, ತೆಂಗು, ಅಡಿಕೆ, ಕಬ್ಬು ಬೆಳೆಯಲು ಅಥವಾ ನೀರಾವರಿ ಮೂಲಕ ರೇಷ್ಮೆ ಬೆಳೆಯಲು ಅರ್ಧ ಹೆಕ್ಟೇರ್ ಭೂಮಿ, ದೀರ್ಘಕಾಲಿಕ ನೀರಾವರಿ ಸೌಲಭ್ಯಗಳನ್ನು ಹೊಂದಿರುವ ಅಥವಾ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ನೀರಾವರಿ ಬೆಳೆಗಳನ್ನು ಬೆಳೆಯುವ ಸೌಲಭ್ಯಗಳಿರುವ ಕಾಲು ಹೆಕ್ಟೇರ್ ಭೂಮಿ ಹೊಂದಿದ ವ್ಯಕ್ತಿಗಳು ಸಣ್ಣ, ಅತಿಸಣ್ಣ ರೈತರಾಗಿದ್ದಾರೆ.

 ಬೆಳಗಾವಿ ಅಧಿವೇಶನದಲ್ಲಿ ಅಂಗೀಕೃತವಾದ ಒಟ್ಟು 16 ಮಸೂದೆಗಳನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದೇವೆ. ಈ ಪೈಕಿ 7 ಮಸೂದೆಗಳಿಗೆ ಅಂಕಿತ ನೀಡಲಾಗಿದೆ. ನಾಲ್ಕು ಮಸೂದೆಗಳು ರಾಜ್ಯಪಾಲರ ಅಂಕಿತಕ್ಕೆ ಬಾಕಿ ಇದೆ. ಐದು ಬಿಲ್​ಗಳ ಬಗ್ಗೆ ಮಾಹಿತಿ ಕೋರಿದ್ದಾರೆ. ಆ ಸಂಬಂಧ ಮಾಹಿತಿಯನ್ನು ಕಳುಹಿಸಿ ಕೊಡಲಾಗಿದೆ. ಮೊನ್ನೆ ನಡೆದ ಅಧಿವೇಶನದಲ್ಲಿ 18 ಬಿಲ್​ಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ  ಎಂದು ಇದೇ ವೇಳೆ ಸಚಿವ ಪಾಟೀಲ ತಿಳಿಸಿದರು.