ಮನೆ ರಾಜಕೀಯ  ರಾಜಕೀಯ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ: ಯು.ಟಿ.ಖಾದರ್​

 ರಾಜಕೀಯ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ: ಯು.ಟಿ.ಖಾದರ್​

0

ಬೆಂಗಳೂರು: ಉತ್ತಮ ರಾಜಕಾರಣಿಯಾಗಲು ಮುಂದಿನ ದಿನಗಳಲ್ಲಿ ರಾಜಕೀಯ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್​ ಹೇಳಿದರು.

ಮಂಗಳವಾರ ವಿಕಾಸ ಸೌಧದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಕೀಲರು, ವೈದ್ಯರು, ಪತ್ರಕರ್ತರು ಸೇರಿದಂತೆ ಇತರೆ ಹಲವು ಕ್ಷೇತ್ರಗಳಿಗೆ ಕಾಲೇಜು ಹಾಗು ವಿಶ್ವವಿದ್ಯಾಲಯಗಳಿವೆ. ಆದರೆ, ಉತ್ತಮ ರಾಜಕಾರಣಿಯಾಗಲು ಯಾವುದೇ ಸಂಸ್ಥೆಗಳಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ರಾಜಕೀಯ ತರಬೇತಿ ಕೇಂದ್ರ ಪ್ರಾರಂಭಿಸುವ ಕುರಿತು ಚಿಂತನೆ ನಡೆದಿದೆ ಎಂದರು.

ಸಮಾಜ ಸುಧಾರಣೆಗೆ ಉತ್ತಮ ರಾಜಕಾರಣಿಯನ್ನು ಆಯ್ಕೆ ಮಾಡುವ ಮೌಲ್ಯ ಮತದಾನಕ್ಕಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮತದಾನದ ಮಹತ್ವ ತಿಳಿದುಕೊಳ್ಳಬೇಕು. ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರಿಗೂ ಒಂದೇ ಮತದಾನದ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಶ್ರೀಮಂತರಿಗಿಂತ ಹೆಚ್ಚಾಗಿ ಬಡವರೇ ಮತದಾನ ಮಾಡುತ್ತಾರೆ. ಶಿಕ್ಷಣ ಪಡೆದವರು ಮತ ಹಾಕುವುದಿಲ್ಲ ಎನ್ನುವುದೇ ದುರದೃಷ್ಟಕರ ಸಂಗತಿ. ಯುವಜನಾಂಗವು ಮತದಾನ ಮೌಲ್ಯವನ್ನರಿತು ತಮ್ಮ ಹಕ್ಕು ಚಲಾಯಿಸಬೇಕು  ಎಂದು ಖಾದರ್ ಸಲಹೆ ನೀಡಿದರು.

 ಕಾನೂನು ವಿದ್ಯಾರ್ಥಿಗಳು ವಿಧಾನಸಭೆ ಕಲಾಪದ ತರಬೇತಿ ಪಡೆದಿರುವುದು ಸಂತಸ ವಿಷಯ. ಈ ತರಬೇತಿ ಒಂದಲ್ಲೊಂದು ದಿನ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ. ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಸಮರ್ಥ ನಾಯಕರಾಗಲು ಸಾಧ್ಯ ಎಂದು ತಿಳಿಸಿದರು.