ಮನೆ ರಾಜಕೀಯ ಮುಖ್ಯಮಂತ್ರಿ ಭೇಟಿ ಮಾಡಿದ ಸ್ಪೀಕರ್ ಬಸವರಾಜ ಹೊರಟ್ಟಿ

ಮುಖ್ಯಮಂತ್ರಿ ಭೇಟಿ ಮಾಡಿದ ಸ್ಪೀಕರ್ ಬಸವರಾಜ ಹೊರಟ್ಟಿ

0

ಬೆಂಗಳೂರು(Bengaluru): ಜೆಡಿಎಸ್ ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಇಂದು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ವೇಳೆ ಪಕ್ಷ ಸೇರ್ಪಡೆ ಸಮಾರಂಭ ದಿನಾಂಕದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಆರ್.ಟಿ.ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದರು.

ನಿನ್ನೆಯೇ ಪರಿಷತ್ ಸ್ಥಾನ ಮತ್ತು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದ ಹೊರಟ್ಟಿ, ಸಿಎಂ ದೆಹಲಿಯಿಂದ ವಾಪಸ್ಸಾದ ಕಾರಣ ರಾಜೀನಾಮೆ ನೀಡಿರಲಿಲ್ಲ. ಹಾಗಾಗಿ, ಇಂದು ಬೆಳಗ್ಗೆಯೇ ಸಿಎಂ ಭೇಟಿಯಾಗಿ ಚರ್ಚೆ ನಡೆಸಿದರು.

ಪಕ್ಷ ಸೇರ್ಪಡೆಗೆ ರಾಜ್ಯ ಬಿಜೆಪಿ ಘಟಕದಿಂದ ಇನ್ನೂ ಯಾವುದೇ ದಿನಾಂಕ ನಿಗದಿಯಾಗಿಲ್ಲ, ಅಲ್ಲದೆ ಸಿಎಂ ದಾವೊಸ್ ಪ್ರವಾಸಕ್ಕೆ ಹೋದರೆ ಮತ್ತೆ ಪಕ್ಷ ಸೇರ್ಪಡೆ ವಿಳಂಬ ಆಗಬಹುದು.ಅಷ್ಟರಲ್ಲಿ ಪರಿಷತ್ ಚುನಾವಣೆಗೆ ನೋಟಿಫಿಕೇಶನ್ ಆದರೆ ಕಷ್ಟ ಆಗುತ್ತದೆ ಅನ್ನುವ ಕಾರಣಕ್ಕೆ ಮೇ 19 ರೊಳಗೆ ಸೇರ್ಪಡೆ ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಿದರು. ಸಿಎಂ ವಿದೇಶ ಪ್ರವಾಸಕ್ಕೂ ಮೊದಲೇ ಹುಬ್ಬಳ್ಳಿಯಲ್ಲಿ ಸೇರ್ಪಡೆ ಕಾರ್ಯಕ್ರಮ ಆಯೋಜನೆ ಮಾಡಿ ಬಿಜೆಪಿ ಸೇರ್ಪಡೆ ಆಗುವ ಕುರಿತು ಮಾತುಕತೆ ನಡೆಸಿದರು. ಈ ಬಗ್ಗೆ ರಾಜ್ಯ ಘಟಕದ ಜೊತೆ ಮಾತುಕತೆ ನಡೆಸಿ ಪಕ್ಷ ಸೇರ್ಪಡೆ ದಿನಾಂಕ ನಿಗದಿ ಮಾಡುವ ಭರವಸೆಯನ್ನು ಸಿಎಂ ನೀಡಿದರು ಎನ್ನಲಾಗಿದೆ.