ಮನೆ ಕಾನೂನು ಸುಪ್ರೀಂ ಕೋರ್ಟ್‌ ಆದೇಶ: ಚುನಾವಣಾ ಬಾಂಡ್‌ ದತ್ತಾಂಶವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಎಸ್‌ ಬಿಐ

ಸುಪ್ರೀಂ ಕೋರ್ಟ್‌ ಆದೇಶ: ಚುನಾವಣಾ ಬಾಂಡ್‌ ದತ್ತಾಂಶವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಎಸ್‌ ಬಿಐ

0

ರಾಜಕೀಯ ಪಕ್ಷಗಳು 2019ರ ಏಪ್ರಿಲ್‌ 12ರಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ ಗಳನ್ನು ನಗದು ಮಾಡಿಕೊಂಡಿರುವ ಸಂಪೂರ್ಣ ಮಾಹಿತಿಯನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮಂಗಳವಾರ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

ಮಂಗಳವಾರ ಸಂಜೆ 5:30ರ ವೇಳೆಗೆ ಚುನಾವಣಾ ಬಾಂಡ್‌ ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಇಸಿಐಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಎಸ್‌ ಬಿಐಗೆ ನಿರ್ದೇಶಿಸಿದ್ದು ಅದನ್ನು ಅನುಪಾಲನೆ ಮಾಡಲಾಗಿದೆ. ಎಲ್ಲವನ್ನೂ ಹೊಂದಿಸಿ ಅದನ್ನು ಮಾರ್ಚ್‌ 15ರ ಒಳಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಇಸಿಐಗೆ ನ್ಯಾಯಾಲಯ ಸೂಚಿಸಿದೆ.

ಚುನಾವಣಾ ಆಯೋಗಕ್ಕೆ ಎಸ್‌ಬಿಐ ಕಳುಹಿಸಿರುವ ದತ್ತಾಂಶವು ಕಚ್ಚಾ ರೂಪದಲ್ಲಿದ್ದು, ಇಸಿಐ ವೆಬ್‌ಸೈಟ್‌ಗೆ ಮಾರ್ಚ್‌ 15ರೊಳಗೆ ಸಿದ್ಧಪಡಿಸಿ ಅಪ್‌ಲೋಡ್‌ ಮಾಡುವುದು ಸವಾಲಿನಿಂದ ಕೂಡಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಬಾಂಡ್‌ ಗೆ ಸಂಬಂಧಿಸಿದ ಮಾಹಿತಿಯನ್ನು ಇಸಿಐಗೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿತ್ತು.

ಸುಪ್ರೀಂ ಕೋರ್ಟ್‌ ನ ಸಾಂವಿಧಾನಿಕ ಪೀಠವು ಫೆಬ್ರವರಿ 15ರಂದು ಚುನಾವಣಾ ಬಾಂಡ್‌ ಯೋಜನೆಯನ್ನು ವಜಾ ಮಾಡಿದ್ದಲ್ಲದೇ 2019ರ ಏಪ್ರಿಲ್‌ 12ರಿಂದ ಇಲ್ಲಿಯವರೆಗೆ ರಾಜಕೀಯ ಪಕ್ಷಗಳು ಸ್ವೀಕರಿಸಿರುವ ದೇಣಿಗೆಯ ಮಾಹಿತಿಯನ್ನು ಇಸಿಐಗೆ ಸಲ್ಲಿಸುವಂತೆ ನಿರ್ದೇಶಿಸಿತ್ತು. ಅಲ್ಲದೇ, ರಾಜಕೀಯ ಪಕ್ಷಗಳು ಪ್ರತಿ ಚುನಾವಣಾ ಬಾಂಡ್‌ ಅನ್ನು ನಗದು ಮಾಡಿಕೊಂಡಿರುವ ವಿವರವನ್ನು ಮಾರ್ಚ್‌ 6ರ ವೇಳೆಗೆ ಇಸಿಐಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು.

ಪ್ರತಿ ಚುನಾವಣಾ ಬಾಂಡ್‌ ಖರೀದಿಸಿರುವ ವಿವರ; ಅದನ್ನು ಖರೀದಿಸಿರುವವರು ಯಾರು; ಎಷ್ಟು ಮೊತ್ತದ ಚುನಾವಣಾ ಬಾಂಡ್‌; ಚುನಾವಣಾ ಬಾಂಡ್‌ ಅನ್ನು ರಾಜಕೀಯ ಪಕ್ಷಗಳು ಎಂದು ನಗದು ಮಾಡಿಕೊಂಡಿವೆ ಎಂಬ ಮಾಹಿತಿಯನ್ನು ಎಸ್‌ಬಿಐ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಎಸ್‌ ಬಿಐನಿಂದ ಮಾಹಿತಿ ಪಡೆದ ಒಂದು ವಾರದಲ್ಲಿ ಇಸಿಐ ತನ್ನ ವೆಬ್‌ ಸೈಟ್‌ ನಲ್ಲಿ ಅದನ್ನು ಪ್ರಕಟಿಸಬೇಕು ಎಂದು ಹೇಳಲಾಗಿತ್ತು.