ಉತ್ತರ ಪ್ರದೇಶ ಅಕ್ರಮ ಮತಾಂತರ ನಿಷೇಧ ಕಾಯಿದೆ- 2021 ಲಿವ್-ಇನ್ ಸಂಬಂಧದಲ್ಲಿರುವ ವ್ಯಕ್ತಿಗಳಿಗೂ ಅನ್ವಯಿಸುತ್ತದೆ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.
ಆರ್ಯ ಸಮಾಜದ ಆಚರಣೆಗಳ ಪ್ರಕಾರ ಕೆಲ ದಿನಗಳ ಹಿಂದೆ ಮದುವೆಯಾದ ಹಿಂದೂ-ಮುಸ್ಲಿಂ ಜೋಡಿಗೆ (ಅರ್ಜಿದಾರರು) ರಕ್ಷಣೆ ನಿರಾಕರಿಸುವುದಾಗಿ ನ್ಯಾ. ರೇಣು ಅಗರ್ವಾಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರು ತಮ್ಮ ಧರ್ಮ ಬದಲಾಯಿಸಿರಲಿಲ್ಲ.
ಮತಾಂತರ ನಿಷೇಧ ಕಾಯಿದೆ ಪ್ರಕಾರ ಅಂತರ್ಧರ್ಮೀಯ ಜೋಡಿ ಮತಾಂತರಕ್ಕೆ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ.
ಕಾಯಿದೆಯ ನಿಯಮಾವಳಿ ಪರಿಶೀಲಿಸಿದ ನ್ಯಾಯಾಲಯ, ಮತಾಂತರದ ನೋಂದಣಿ ಮದುವೆಯೊಂದಕ್ಕೆ ಮಾತ್ರವಲ್ಲ, ಮದುವೆಯ ಸ್ವರೂಪದಲ್ಲಿರುವ ಉಳಿದ ಸಂಬಂಧಗಳಿಗೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಆದ್ದರಿಂದ, ಮತಾಂತರ ನಿಷೇಧ ಕಾಯಿದೆ ಮದುವೆ ಅಥವಾ ಲಿವ್-ಇನ್-ಸಂಬಂಧದ ಸ್ವರೂಪದಲ್ಲಿರುವ ಸಂಬಂಧಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯದಲ್ಲಿ 2021ರಲ್ಲಿ ಜಾರಿಗೆ ಬಂದ ಮತಾಂತರ ನಿಷೇಧ ಕಾಯಿದೆಯು ತಪ್ಪು ಚಿತ್ರಣ ನೀಡುವ, ಬಲಪ್ರಯೋಗ, ಅನುಚಿತ ಪ್ರಭಾವ, ಬಲಾತ್ಕಾರ, ಪ್ರಲೋಭನೆ ಅಥವಾ ಇನ್ನಾವುದೇ ಮೋಸದ ವಿಧಾನದ ಮೂಲಕ ಹಾಗೂ ವಿವಾಹದ ಮೂಲಕ ಯಾವುದೇ ವ್ಯಕ್ತಿ ಮತಾಂತರ ಮಾಡುವಂತಿಲ್ಲ ಎನ್ನುತ್ತದೆ.
ಅಕ್ರಮ ಮತಾಂತರಕ್ಕಾಗಿ ಮಾಡಿಕೊಳ್ಳಲಾಗುವ ಮದುವೆಯನ್ನು ಕೌಟುಂಬಿಕ ನ್ಯಾಯಾಲಯ ಅನೂರ್ಜಿತಗೊಳಿಸಬೇಕು ಎಂದು ಅದು ಹೇಳುತ್ತದೆ.
ಮದುವೆಯ ಉದ್ದೇಶಗಳಿಗಾಗಿ ಮತಾಂತರವಾಗುವ ವ್ಯಕ್ತಿ ಮತಾಂತರವಾಗುತ್ತಿರುವ ಕುರಿತು ಅಧಿಕಾರಿಗೆಳೆದುರು ಘೋಷಿಸಬೇಕಾಗುತ್ತದೆ. ಬಲವಂತವಾಗಿ ಮದುವೆ ನಡೆದಿಲ್ಲ ಎಂಬುದನ್ನು ಅಧಿಕಾರಿಗಳು ತನಿಖೆ ಮೂಲಕ ಖಾತ್ರಿ ಪಡಿಸಿಕೊಳ್ಳುತ್ತಾರೆ.
ಆದರೆ, ಲಿವ್-ಇನ್ ಜೋಡಿ ಅಥವಾ ಮತಾಂತರವಿಲ್ಲದೆ ಮದುವೆಯಾಗುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕಾಯಿದೆ ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ.
ಅಕ್ರಮ ಮತಾಂತರ ನಿಷೇಧದ ನಿಬಂಧನೆ ಈ ಕೆಳಗಿನಂತಿದೆ:
ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2001
ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2001
ಕಾಯ್ದೆಯ ಸೆಕ್ಷನ್ 3 (1) ರ ಅಡಿಯಲ್ಲಿ ವಿವರಣೆಯನ್ನು ವಿಶ್ಲೇಷಿಸಿದ ನಂತರ ನ್ಯಾಯಾಲಯ ಮತಾಂತರ ನಿಷೇಧ ಕಾಯಿದೆ ಲಿವ್-ಇನ್ ಸಂಬಂಧಗಳಿಗೂ ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಹೀಗಾಗಿ, ಅರ್ಜಿದಾರರು ಕಾಯಿದೆಯಡಿ ಮತಾಂತರ ನೋಂದಣಿಗೆ ಅರ್ಜಿ ಸಲ್ಲಿಸದೆ ಇರುವುದರಿಂದ ಅವರ ಸಂಬಂಧವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದಿದೆ.
ಅರ್ಜಿದಾರರು ಈಗಾಗಲೇ ವಿವಾಹಿತರಾಗಿದ್ದರೆ ಮತ್ತು ಅವರ ಸಂಗಾತಿ ಜೀವಂತವಾಗಿದ್ದರೆ, ಹಿಂದಿನ ಸಂಗಾತಿಯಿಂದ ವಿಚ್ಛೇದನ ಪಡೆಯದೆ ಮೂರನೇ ವ್ಯಕ್ತಿಯೊಂದಿಗೆ ಲಿವ್-ಇನ್- ಸಂಬಂಧಕ್ಕೆ ಮುಂದಾಗಲು ಅವನಿಗೆ / ಅವಳಿಗೆ ಅನುಮತಿ ನೀಡಲಾಗದು ಎಂದು ಕೂಡ ನ್ಯಾಯಾಲಯ ತಿಳಿಸಿದೆ.
ಮತಾಂತರ ನಿಷೇಧ ಕಾಯಿದೆ ಪಾಲಿಸದ ಹಿಂದೂ-ಮುಸ್ಲಿಂ ದಂಪತಿಗಳಿಗೆ ಹೈಕೋರ್ಟ್ ಈ ಹಿಂದೆ ಕೂಡ ರಕ್ಷಣೆ ನಿರಾಕರಿಸಿತ್ತು.