vಕಲಬುರಗಿ: ತನಗೆ ಮತ್ತೊಂದು ಜೀವ ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ ತನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನೀವೇ (ಬಿಜೆಪಿ) ಈ ಚುನಾವಣೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ. ಗೊಂದಲ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದೀರಿ. ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದರೂ ಚುನಾವಣೆ ಗೆಲ್ಲಬೇಕು ಎಂಬ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ತನಗೆ ಮತ್ತೊಂದು ಜೀವ ಬೆದರಿಕೆ ಬಂದಿದೆ. ಅದರಲ್ಲಿ ನನ್ನನ್ನು ಎನ್ಕೌಂಟರ್ ಮಾಡುವುದು ಸತ್ಯ ಎಂದು ಬೆದರಿಕೆ ಹಾಕಲಾಗಿದೆ ಅಲ್ಲದೆ, ಈ ಬೆದರಿಕೆ ಪತ್ರ ಫಿನ್ ಲ್ಯಾಂಡ್ನಿಂದ ಬಂದಿದೆ ಎಂದು ಹೇಳಿ ಸುದ್ದಿಗೋಷ್ಠಿಯಲ್ಲಿ ಜೀವ ಬೆದರಿಕೆ ಪತ್ರ ಓದಿದರು.
“ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗೂ, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. “ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂಟರ್ ಮಾಡುವುದು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ” ಎಂದರು.
ಬಿಜೆಪಿಯವರಿಗೆ ನಮ್ಮನ್ನ ರಾಜಕೀಯವಾಗಿ ಎದುರಿಸಲು ಆಗುತ್ತಿಲ್ಲ. ಹೀಗಾಗೇ ವೈಯಕ್ತಿಕವಾಗಿ ಟಾರ್ಗೇಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನೂ ಹೆದರುವುದಿಲ್ಲ. “ನಾನು ಬಳೆ ತೊಟ್ಟುಕೊಂಡಿಲ್ಲ, ಆಖಾಡದಲ್ಲಿ ರೆಡಿಯಿದ್ದೇನೆ” ಎಂದು ಸಂಸದ ಉಮೇಶ್ ಜಾದವ್ ಅವರೇ ಹೇಳುತ್ತಾರೆ. ಇದಕ್ಕೆ ನಮ್ಮ ಸಂಸದರು ಉತ್ತರ ನೀಡಬೇಕು. ನೇರವಗಿ ಮನುವಾದಿಗಳೇ ಬೇದರಿಕೆ ಹಾಕುತ್ತಿದ್ದಾರೆ ಎಂದರು.
ಬೆದರಿಕೆ ಸಂಬಂಧ ಮಾರ್ಚ್ 13 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ. ಹೆದರಿಸುವುದು ಅಥವಾ ಬೆದರಿಸಲು ಬಂದರೆ ನಾವು ಹೆದರುವುದಿಲ್ಲ ಎಂದರು.