ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆಶೀರ್ವಾದ ನಮಗೆ ಆನೆ ಬಲ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬಿಜೆಪಿ ಜೆಡಿಎಸ್ ಸಮನ್ವಯ ಸಭೆ ಬಳಿಕ ಮಾತನಾಡಿದ ಅವರು, ಈ ಸಭೆ ಬಹಳ ಹಿಂದೆಯೇ ಆಗಬೇಕಾಗಿತ್ತು. ಈ ಸಮ್ಮಿಲನ ಸುವರ್ಣಾಕ್ಷರದಲ್ಲಿ ಬರೆದಿಡುವ ಫಲಿತಾಂಶ ಆಗಲಿದೆ. ಹಿಂದೆಯೂ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಹೊಂದಾಣಿಕೆ ಆಗಿತ್ತು. ಆದರೆ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಅಂದಿನ ಕಾಲಘಟ್ಟದಲ್ಲಿ ದೇವೇಗೌಡರ ಸಮ್ಮತಿ ಇರಲಿಲ್ಲ ಎಂಬುದೂ ಗೊತ್ತಿರುವ ವಿಚಾರ. ಇದೀಗ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ದೇವೇಗೌಡರು ಆಶೀರ್ವಾದ ಮಾಡಿರುವುದು ಆನೆ ಬಲ ತಂದಿದೆ ಎಂದು ಹೇಳಿದರು.
ರಾಜದಲ್ಲಿ ಹಲವು ಹೊಂದಾಣಿಕೆ ರಾಜಕಾರಣ ನಡೆದಿದೆ. ಮೈತ್ರಿಯನ್ನು ರಾಜ್ಯದ ಜನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇನ್ನೂ ಕೂಡಾ ಸಮನ್ವಯತೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಆರೋಗ್ಯದ ಸಮಸ್ಯೆಯನ್ನು ಕಡೆಗಣಿಸಿ ಕುಮಾರಸ್ವಾಮಿ ಪ್ರವಾಸ ಕೈಗೊಂಡು ಬದ್ಧತೆ ತೋರಿಸಿದ್ದಾರೆ. ಸಿಎಂ ಕನಿಷ್ಠ 15-20 ಮಂತ್ರಿಗಳನ್ನು ಸ್ಫರ್ಧೆ ಮಾಡಿಸಬೇಕು ಎಂದುಕೊಂಡಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಎಷ್ಟು ಗಟ್ಟಿಯಾಗಿದೆ ಅಂದರೆ, ಕಾಂಗ್ರೆಸ್ ಪಕ್ಷದ ಯಾವುದೇ ಮಂತ್ರಿ ಸ್ಪರ್ಧಿಸುವ ಎದೆಗಾರಿಕೆ ತೋರಿಸಲು ಸಾಧ್ಯವಾಗಿಲ್ಲ ಎಂದು ವಿಜಯೇಂದ್ರ ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ, ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್, ಮಾಜಿ ಸಿಎಂಗಳಾದ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್, ಎಂಎಲ್ಸಿ ಶರವಣ, ಸಂಸದ ಸದಾನಂದಗೌಡ, ಮಾಜಿ ಸಚಿವ ಗೋವಿಂದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರು ಸಭೆಯಲ್ಲಿ ಭಾಗಿಯಾದರು.