ಮನೆ ಕಾನೂನು ಚುನಾವಣೆ ಘೋಷಣೆ ರೇರಾ ನೇಮಕಕ್ಕೆ ಅಡ್ಡಿಯಲ್ಲ; ಮುಂದಿನ ವಿಚಾರಣೆಗೆ ವೇಳೆಗೆ ನೇಮಕ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌...

ಚುನಾವಣೆ ಘೋಷಣೆ ರೇರಾ ನೇಮಕಕ್ಕೆ ಅಡ್ಡಿಯಲ್ಲ; ಮುಂದಿನ ವಿಚಾರಣೆಗೆ ವೇಳೆಗೆ ನೇಮಕ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ಗಡುವು

0

ಲೋಕಸಭಾ ಚುನಾವಣೆ ಘೋಷಣೆಯಾಗಿದೆ ಎಂದು ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಕ್ಕೆ (ರೇರಾ) ಅಧ್ಯಕ್ಷ ಮತ್ತು ಸದಸ್ಯರ ನೇಮಕ ಪ್ರಕ್ರಿಯೆ ಜಾರಿಗೆ ವಿಳಂಬ ಧೋರಣೆ ಅನುಸರಿಸಲಾಗದು ಎಂದು ರಾಜ್ಯ ಸರ್ಕಾರಕ್ಕೆ ಈಚೆಗೆ ಚಾಟಿ ಬೀಸಿರುವ ಕರ್ನಾಟಕ ಹೈಕೋರ್ಟ್‌, ಮುಂದಿನ ವಿಚಾರಣೆಯ ವೇಳೆಗೆ ರೇರಾದಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಗಡುವು ವಿಧಿಸಿದೆ.

Join Our Whatsapp Group

ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮುಖ್ಯಸ್ಥರನ್ನು ನೇಮಿಸುವಂತೆ ಕೋರಿ ಬೆಂಗಳೂರಿನ ಮ್ಯಾಥ್ಯೂ ಥಾಮಸ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಈಚೆಗೆ ವಿಚಾರಣೆ ನಡೆಸಿತು.

“ಮೇಲಿಂದ ಮೇಲೆ ನ್ಯಾಯಾಲಯವು ಮಾಡಿರುವ ಆದೇಶಗಳನ್ನು ಜಾರಿಗೊಳಿಸಲು ಲೋಕಸಭೆಗೆ ಚುನಾವಣೆ ಘೋಷಣೆಯಾಗಿರುವುದು ಅಡಚಣೆಯಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಈಗ ಬಿಂಬಿಸುತ್ತಿದ್ದಾರೆ. 22.01.2024ರಂದು ನಡೆದಿರುವ ಕಲಾಪದ ಪ್ರಕ್ರಿಯೆಯನ್ನು ಚುನಾವಣೆ ಘೋಷಣೆಯಾಗಿದೆ ಎಂದು ವಿಳಂಬಿಸುವ ಅಗತ್ಯವಿಲ್ಲ ಎಂದು ಹೇಳಬೇಕಿಲ್ಲ. ನ್ಯಾಯಾಧಿಕರಣ ಕರ್ತವ್ಯನಿರ್ವಹಿಸುವಂತೆ ಮಾಡುವುದು ಅತ್ಯಗತ್ಯವಾಗಿ ಆಗಬೇಕಿದ್ದು, ಅದೇ ರೀತಿ ರೇರಾದಲ್ಲಿನ ಸದಸ್ಯರ ಹುದ್ದೆ ತುಂಬುದು ಅನಿವಾರ್ಯವಾಗಿದೆ. ಇದರಿಂದ ಹೈಕೋರ್ಟ್‌ಗೆ ಸಲ್ಲಿಕೆಯಾಗುತ್ತಿರುವ ಅಪಾರ ಸಂಖ್ಯೆಯ ಪ್ರಕರಣಗಳನ್ನು ತಡೆಯಬಹುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ನ್ಯಾಯಾಧಿಕರಣದ ಕಾರ್ಯನಿರ್ವಹಣೆ ಮತ್ತು ರೇರಾಗೆ ಸದಸ್ಯರ ನೇಮಕಾತಿಯು ಅತ್ಯಗತ್ಯವಾಗಿ ಆಗಬೇಕಿದ್ದು, ಈ ಪ್ರಕರಣದ ವಿಶಿಷ್ಟ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆದೇಶ ಮಾಡಲಾಗಿದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ಏಪ್ರಿಲ್‌ 15ಕ್ಕೆ ಮುಂದೂಡಿದೆ.

2024ರ ಜನವರಿ 22ರಂದು ಹೈಕೋರ್ಟ್‌ “ನ್ಯಾಯಾಧಿಕರಣಕ್ಕೆ ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ಸಕ್ಷಮ ಪ್ರಾಧಿಕಾರ ಮಾಡಿದ ಆದೇಶಗಳನ್ನು ಪ್ರವರ್ತಕರು ಪ್ರಶ್ನಿಸಿದ್ದು, ಸಾಕಷ್ಟು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿವೆ. ಇವೆಲ್ಲವನ್ನೂ ನ್ಯಾಯಾಧಿಕರಣದ ಮುಂದೆ ಸಲ್ಲಿಸಬೇಕಾಗಿದೆ. ನ್ಯಾಯಾಧಿಕರಣ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಏಕೈಕ ಕಾರಣಕ್ಕೆ ಈ ನ್ಯಾಯಾಲಯದಲ್ಲಿ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ರಾಜ್ಯ ಸರ್ಕಾರವು ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ನ್ಯಾಯಾಧಿಕರಣ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ಹೈಕೋರ್ಟ್‌ನಲ್ಲಿ ಬಾಕಿ ಪ್ರಕರಣ ಹೆಚ್ಚಲು ಸರ್ಕಾರ ಕಾರಣವಾಗಿದೆ” ಎಂದು ಕಟುವಾಗಿ ನುಡಿದಿತ್ತು.

ಹಿಂದಿನ ಲೇಖನನನ್ನ ನೋವು ದೊಡ್ಡದಲ್ಲ. ಕಾಂಗ್ರೆಸ್ ಪಕ್ಷವೇ ದೊಡ್ಡದು: ಕೆ.ಹೆಚ್​.ಮುನಿಯಪ್ಪ
ಮುಂದಿನ ಲೇಖನಹೆಚ್​ ಡಿ ದೇವೇಗೌಡರ ಆಶೀರ್ವಾದ ನಮಗೆ ಆನೆ ಬಲ ತಂದಿದೆ: ಬಿ ವೈ ವಿಜಯೇಂದ್ರ