ಮನೆ ರಾಜ್ಯ ಬರ ಪರಿಹಾರ ವರದಿ ಸಲ್ಲಿಕೆ ವಿಳಂಬವಾಗಿದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್  ಶಾ  ಹೇಳಿಕೆ...

ಬರ ಪರಿಹಾರ ವರದಿ ಸಲ್ಲಿಕೆ ವಿಳಂಬವಾಗಿದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್  ಶಾ  ಹೇಳಿಕೆ ಸತ್ಯಕ್ಕೆ ದೂರ: ಸಚಿವ ಪ್ರಿಯಾಂಕ್ ಖರ್ಗೆ

0

ಕಲಬುರಗಿ‌: ಬರ ಪರಿಹಾರ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಮೂರು ತಿಂಗಳು ವಿಳಂಬ ಮಾಡಿದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಸುಳ್ಳು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Join Our Whatsapp Group

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ 236 ತಾಲೂಕಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಹಾಗೂ  223 ತಾಲೂಕುಗಳ ಪೈಕಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿ ಕೇಂದ್ರಕ್ಕೆ ಸೆಪ್ಟೆಂಬರ್ 22, 2023 ಎಂದು ವರದಿ‌ ಸಲ್ಲಿಸಿತ್ತು.  ನಂತರ 10 ಸದಸ್ಯರ ಕೇಂದ್ರದ‌ ತಂಡ ಅಕ್ಟೋಬರ್ 05 ಹಾಗೂ 9 ರಂದು ಬರಪೀಡಿತ ಪ್ರದೇಶಗಳಿಗೆ ಭೇಟಿ‌ ನೀಡಿ ಬರ ಅಧ್ಯಯನ ನಡೆಸಿತ್ತು.  ಆ ನಂತರ, ರಾಜ್ಯದ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಹೆಚ್ಚುವರಿ ಮನವಿಯನ್ನು  ಅಕ್ಟೋಬರ್ 9 ರಂದು ಕೇಂದ್ರಕ್ಕೆ ಸಲ್ಲಿಸಲಾಗಿತ್ತು‌

ಬರ ಮ್ಯಾನುವೆಲ್ ನಿಯಮಾವಳಿ ಪ್ರಕಾರ ಮುಂಗಾರು ಹಂಗಾಮಿನಲ್ಲಿನ ಬರದ ವರದಿಯನ್ನು ಅಕ್ಟೋಬರ  31 ಹಾಗೂ ಹಿಂಗಾರಿನ ಬರದ ವರದಿಯನ್ನು ಮಾರ್ಚ್ 31 ರ ಒಳಗಾಗಿ ಸಲ್ಲಿಸಬೇಕು. ರಾಜ್ಯ ಸರ್ಕಾದ ಮುಂಗಾರಿನ ಬರದ ವರದಿಯನ್ನು ಸೆಪ್ಟೆಂಬರ್ 22 ಕ್ಕೆ‌ಹಾಗೂ ಹೆಚ್ಚುವರಿ ಮನವಿಯನ್ನು ಅಕ್ಟೋಬರ್ 9 ಕ್ಕೆ ಸಲ್ಲಿಸಿದ್ದು ನಿಯಮಾವಳಿ  ನಿಗದಿಪಡಿಸಿದ ದಿನಾಂಕದ ಒಳಗೆ ಸಲ್ಲಿಸಲಾಗಿದೆ. ಆದರೂ ಕೂಡಾ ಕೇಂದ್ರ ಗೃಹ ಸಚಿವರು ಮನವಿಯನ್ನು ವಿಳಂಬವಾಗಿ ಸಲ್ಲಿಸಲಾಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದರು.

ಮುಂದುವರೆದು ಮಾತನಾಡಿದ ಸಚಿವರು, ರಾಜ್ಯದ ಒಟ್ಟು 48 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು ರೂ 18171.44 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ‌ ಇಲಾಖೆ ಸಚಿವ ನರೇಂದ್ರ ಸಿಂಗ್ ತೋಮರ್, ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್  ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನವೆಂಬರ್ 15, 2023 ರಂದು ಬರೆದ ಪತ್ರದಲ್ಲಿ  ಮನವಿ ಮಾಡಿಕೊಂಡಿದ್ದಾರೆ. ಇದಲ್ಲದೇ,  ನವೆಂಬರ್ 23, 2023 ರಂದು ಕೃಷಿ ಸಚಿವ ಹಾಗೂ ಕಂದಾಯ ಸಚಿವರು ಖುದ್ದಾಗಿ ಕೇಂದ್ರ ಹಣಕಾಸು ಸಚಿವೆ ಅವರನ್ನು ಭೇಟಿಯಾಗಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.  ಇದಾದ ನಂತರ, ಡಿಸೆಂಬರ್ 20, 2023 ರಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಕೇಂದ್ರ ಗೃಹ‌ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ನಂತರ, ಜನೇವರಿ 19, 2024 ರಂದು ಮುಖ್ಯಮಂತ್ರಿ ಪ್ರಧಾನಿ ಅವರಿಗೆ ಪತ್ರ ಬರೆದು ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಇಷ್ಟಾದರೂ ಕೇಂದ್ರ ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರೆಸಿರುವುದನ್ನು ವಿರೋಧಿಸಿ ರಾಜ್ಯದ ಸಚಿವರು ಫೆಬ್ರುವರಿ 7, 2024 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಖರ್ಗೆ ವಿವರಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದು ಬರಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಪತ್ರ ಬರೆಯುವ ಮೂಲಕ, ಸಚಿವರನ್ನು ಖುದ್ದಾಗಿ ಭೇಟಿ ಮಾಡುವ ಮೂಲಕ, ತನ್ನೆಲ್ಲ ಪ್ರಯತ್ನವನ್ನು ಮಾಡಿದ್ದರೂ ಕೂಡಾ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ಕರೆದು ತೀರ್ಮಾನ ಮಾಡುವ ಗೋಜಿಗೆ ಹೋಗಿಲ್ಲ. ಆದರೆ, ರಾಜ್ಯಕ್ಕೆ ಬಂದಾಗ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಅಮಿತ್ ಶಾ ಸುಳ್ಳು ಹೇಳುತ್ತಿರುವುದು ನೋಡಿದರೆ ಜರ್ಮನಿಯ ಹಿಟ್ಲರ್ ಆಡಳಿತದಲ್ಲಿ ಮಿನಿಷ್ಟ್ರೀ ಆಫ್ ಪ್ರೊಪಗಂಡಾ ಹಾಗೂ ಎನ್ಲೈಟನ್ ಮೆಂಟ್ ( Ministry of Propaganda and Enlightenment) ಖಾತೆ ನೋಡಿಕೊಳ್ಳುತ್ತಿದ್ದ ಗೊಯೆಬಲ್ಸ್ ( Goebbels ) ಎನ್ನುವವರ ನೆನಪಾಗುತ್ತದೆ ಎಂದ ಪ್ರಿಯಾಂಕ್, ಅವರು ಅಲ್ಲಿನ ರೆಡಿಯೋ ಹಾಗೂ ಟಿವಿಗಳಲ್ಲಿ ಸುಳ್ಳುಗಳ ಕಾರ್ಯಕ್ರಮಗಳನ್ನು ಬಿತ್ತರವಾಗುವಂತೆ ಹಾಗೂ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುವಂತೆ ನೋಡಿಕೊಂಡು ಅದೇ ಸುಳ್ಳುಗಳನ್ನು ಜನಸಾಮಾನ್ಯರು ಸತ್ಯ ಎಂದು ನಂಬುವಂತೆ ಮಾಡುತ್ತಿದ್ದ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ಚಿಂಚೋಳಿ ಸಂಸದ ಸೇರಿದಂತೆ ರಾಜ್ಯದ ಯಾವೊಬ್ಬ ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ ವಸ್ತುಸ್ಥಿತಿಯನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಪ್ರವೀಣ್ ಹರವಾಳ, ಡಾ ಕಿರಣ್ ದೇಶಮುಖ್ ಸೇರಿದಂತೆ ಹಲವರಿದ್ದರು.