ಮೈಸೂರು: ನಮ್ಮ ಗ್ಯಾರಂಟಿ ಸರ್ಕಾರದಷ್ಟೇ ಗ್ಯಾರಂಟಿಯಾಗಿ ನಿಮ್ಮ ಸೇವಕನಾಗಿ ಕೆಲಸ ಮಾಡಿಕೊಡುತ್ತೇನೆ ನನಗೊಂದು ಅವಕಾಶ ಕೊಡಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ್ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ನಾಗನಹಳ್ಳಿ, ಸಿದ್ದಲಿಂಗಪುರ, ಕೆ.ಆರ್.ಮಿಲ್ ಕಾಲೋನಿ, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯಾ, ಆಲನಹಳ್ಳಿ ಹಾಗೂ ಹೊಸುಂಡಿ ಗ್ರಾಮಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಪುತ್ರ ಹಾಗೂ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರ ಜತೆಗೂಡಿ ಮತಯಾಚನೆ ಮಾಡಿ ಅವರು ಮಾತನಾಡಿದರು. ಎಲ್ಲಾ ಕಾರ್ಯಕ್ರಮಗಳನ್ನು ಕೊಡುವ ವ್ಯವಸ್ಥೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಾಗಿದೆ. ಪ್ರತಿಯೊಬ್ಬರನ್ನೂ ಒಟ್ಟಿಗೆ ಕರೆದೊಯ್ಯುವುದು ಕಾಂಗ್ರೆಸ್ ಪಕ್ಷವಾಗಿದೆ. ರಾಜ್ಯದಲ್ಲಿ ಬರಗಾಲ ಇದ್ದರೂ ಕೇಂದ್ರ ಸರ್ಕಾರ ನಯಾಪೈಸೆ ಕೊಡಲಿಲ್ಲ. ಸೆಪ್ಟಂಬರ್‌ನಲ್ಲೇ ವರದಿ ಕೊಟ್ಟು ಮನವಿ ಮಾಡಿದರೂ ಸ್ಪಂದನೆ ಮಾಡಲಿಲ್ಲ. ಎನ್ ಡಿಆರ್ ಎ ತಂಡವೇ ೧೮ ಸಾವಿರ ಕೋಟಿ ರೂ.ಪರಿಹಾರವನ್ನು ತ್ವತರಿತವಾಗಿ ಬಿಡುಗಡೆ ಮಾಡಬೇಕೆಂದು ವರದಿ ಕೊಟ್ಟರು ಐದು ಪೈಸೆ ಬಿಡುಗಡೆ ಮಾಡಿಲ್ಲ. ಅವರು ಪುಕ್ಕಟ್ಟೆ ಕೊಡದಿದ್ದರೂ ನಮ್ಮ ರಾಜ್ಯದ ತೆರಿಗೆ ಹಣದಲ್ಲಿ ನ್ಯಾಯಯುತವಾಗಿ ನೀಡಬೇಕಾದ ಅನುದಾನ ನೀಡಲಿಲ್ಲ. ಬರೀ ಸುಳ್ಳು ಹೇಳಿಕೊಂಡೆ ತಿರುಗಾಡುವ ಕೆಲಸ ಮಾಡುತ್ತಾರೆ. ಆದುದರಿಂದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ನಾಗನಹಳ್ಳಿಯಲ್ಲಿ ಸುಸಜ್ಜಿತ ರೈಲ್ವೆ ಫ್ಲಾಟ್ ಫಾರಂ ನಿರ್ಮಿಸುವುದಾಗಿ 2017 ರಲ್ಲೇ ರೈಲ್ವೆ ಸಚಿವರಾಗಿದ್ದ ಸದಾನಂದಗೌಡ ಅವರನ್ನು ಕರೆದು ತಂದು ಘೋಷಣೆ ಮಾಡಿ ಬಾವುಟ ಹಾರಿಸಿದರು. ರೈಲ್ವೆ ಟರ್ಮಿನಲ್ ಗೆ 36 ಭೂಮಿಯನ್ನು ವಶಕ್ಕೆ ಪಡೆಯುವುದಾಗಿ ಹೇಳಿ ಹೋದವರು ಇದುವರೆವಿಗೂ ಬಂದಿಲ್ಲ. ಈಗ ಅದು ಸೂಕ್ತ ಜಾಗವಲ್ಲವೆಂದು ಹೇಳಿ, ಇರುವ ಜಾಗದಲ್ಲೇ ಹೆಚ್ಚುವರಿ ಎರಡು ಫ್ಲಾಂಟ್ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗೆ ಬಿಜೆಪಿ ಸುಳ್ಳು ಹೇಳುವುದು ಬಿಟ್ಟರೆ ಎನೂ ಆಗಿಲ್ಲ ಎಂದರು.
ಪ್ರತಾಪ್ ಸಿಂಹ ಮಾದ್ಯಮಗಳ ಮುಂದೆ ಬಂದೂ ಅವರಿವರನ್ನು ಬೈದಿದ್ದು ಬಿಟ್ಟರೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ನಾನೇ ಮಾಡಿದ್ದು, ನಾನೇ ಮಾಡಿದ್ದು ಎಂದು ಹೇಳಿದ್ದು ಬಿಟ್ಟರೆ ಎನೂ ಮಾಡಲಿಲ್ಲ. ಆದರೆ, ನಾನು ನಿಮಗೆ ಭರವಸೆ ನೀಡುತ್ತೇನೆ. ನನಗೆ ನೀವು ಹಾಕುವ ಮತಕ್ಕೆ ಐದು ವರ್ಷವೂ ನಿಮ್ಮ ಸೇವಕನಾಗಿ ನಿಮ್ಮ ಕೆಲಸ ಮಾಡುತ್ತೇನೆ. ದಯಾಮಾಡಿ ಒಂದು ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆಂದು ಹೇಳಿದರು.
ಲೋಕಸಭಾ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಿನಿ ೨೨ ಸಾವಿರ ಕೋಟಿ ರೂ.ಗಳನ್ನೂ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮೈಸೂರ್ ಜಿಲ್ಲೆಗೆ ನೀಡಿದ್ದಾರೆ. ಇಂದು ಉತ್ತಮ ರಸ್ತೆಗಳಿದ್ದರೆ ಅದು ಎಚ್.ಸಿ.ಮಹದೇವಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆಯೇ ಕಾರಣವಾಗಿದೆ. ಇದು ಆಗ ಅರ್ಥ ಆಗದೇ ಐದು ವರ್ಷದ ಬಳಿಕ ಅರ್ಥ ಆಯಿತು. ಈಗ ಅದಕ್ಕೆ ಮತ್ತೆ ಸಿಎಂ ಆಗಿ ಸಿದ್ದರಾಮಯ್ಯ ಬಂದಿದ್ದಾರೆ. ೫೭ಸಾವಿರ ಕೋಟಿ ರೂ.ಗಳನ್ನು ಪಂಚ ಗ್ಯಾರಂಟಿಗೆ ನೀಡಿದ್ದೇವೆ. ೩.೫ ಕೋಟಿ ಮಂದಿಗೆ ನಮ್ಮ ಗ್ಯಾರಂಟಿ ತಲುಪಿದೆ. ಅದಕ್ಕೆ ಕೂಲಿಯಾಗಿ ಮತ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ರಾಕೇಶ್ ಪಾಪಣ್ಣ, ರೇಖಾ ವೆಂಕಟೇಶ್, ಜಿಲ್ಲಾ ಗ್ಯಾರಂಟಿ ಯೋಜನ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಊಮಾಶಂಕರ್, ಕೃಷ್ಣಕುಮಾರ್‌ಸಾಗರ್, ಕೆಂಪನಾಯಕ, ಇಲವಾಲ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಸತೀಶ್, ಗುರುಸ್ವಾಮಿ, ಮಲ್ಲೇಶ್, ರಾಮೇಗೌಡ, ಮುತ್ತುರಾಜ್, ಕೆ.ಎಸ್.ಸಣ್ಣಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಚೆನ್ನಯ್ಯ, ಹಂಚ್ಯಾ ಶ್ರೀನಿವಾಸ್‌ಗೌಡ, ನಾಗನಹಳ್ಳಿ, ಸಿದ್ದಲಿಂಗಪುರ, ಕೆ.ಆರ್.ಮಿಲ್ ಕಾಲೋನಿ, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯಾ, ಆಲನಹಳ್ಳಿ ಹಾಗೂ ಹೊಸುಂಡಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.