ಮನೆ ರಾಜಕೀಯ ವಿಜಯೇಂದ್ರಗೆ ವಿಧಾನ ಪರಿಷತ್‌ ಸ್ಥಾನ ನೀಡುವುದು ಕುಟುಂಬ ರಾಜಕಾರಣವಲ್ಲವೇ?: ಕಾಂಗ್ರೆಸ್‌ ಪ್ರಶ್ನೆ

ವಿಜಯೇಂದ್ರಗೆ ವಿಧಾನ ಪರಿಷತ್‌ ಸ್ಥಾನ ನೀಡುವುದು ಕುಟುಂಬ ರಾಜಕಾರಣವಲ್ಲವೇ?: ಕಾಂಗ್ರೆಸ್‌ ಪ್ರಶ್ನೆ

0

ಬೆಂಗಳೂರು (Bengaluru)- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಪುತ್ರ ಬಿ.ವೈ.ವಿಜಯೇಂದ್ರಗೆ (B.Y.Vijayendra) ವಿಧಾನ ಪರಿಷತ್‌ ಸ್ಥಾನ ನೀಡಲು ಹೊರಟಿರುವುದು ಕುಟುಂಬ ರಾಜಕಾರಣ ಅಲ್ಲವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್‌ 3ರಂದು ನಡೆಯುವ ಚುನಾವಣೆಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಪ್ರಸ್ತಾವಕ್ಕೆ ಬಿಜೆಪಿ ರಾಜ್ಯ ಪ್ರಮುಖರ ಸಮಿತಿ (ಕೋರ್‌ ಕಮಿಟಿ) ಶನಿವಾರ ಒಪ್ಪಿಗೆ ನೀಡಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ವಿಜಯೇಂದ್ರ ಅವರಿಗೆ ಮಂತ್ರಿಗಿರಿ ಹಾಗೂ ಪರಿಷತ್ ಸದಸ್ಯ ಸ್ಥಾನ ನೀಡಲು ಮುಂದಾಗಿರುವ ಬಿಜೆಪಿ ಉತ್ತರಿಸಲಿ. ಇದು ಕುಟುಂಬ ರಾಜಕಾರಣ ಅಲ್ಲವೇ? ವಿಜಯೇಂದ್ರರಿಗೆ ಸಿಗುತ್ತಿರುವ ಈ ಮನ್ನಣೆ ಬಿಎಸ್‌ವೈ ಪುತ್ರ ಎನ್ನುವ ಒಂದೇ ಕಾರಣಕ್ಕೆ ಅಲ್ಲವೇ? ‘ವಂಶವಾದ’ವನ್ನು ಪ್ರಭಲವಾಗಿ ಪ್ರತಿಪಾದಿಸುತ್ತಿರುವುದು ಬಿಜೆಪಿಯೇ ಅಲ್ಲವೇ?‘ ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.

‘ಬಾಯಲ್ಲಿ ವೇದ, ಮಂತ್ರ, ಹೊಟ್ಟೆಯಲ್ಲಿ ಚಿಕನ್ ಬಿರಿಯಾನಿ– ಇದು ಬಿಜೆಪಿ ವರಸೆ. ನಮ್ಮಲ್ಲಿ ವಂಶರಾಜಕಾರಣವೇ ಇಲ್ಲವೆಂಬ ಹಸಿಸುಳ್ಳನ್ನ ಹೇಳುವ ಬಿಜೆಪಿಯೇ ಕುಟುಂಬ ರಾಜಕಾರಣದ ‘ಮಹಾಪೋಷಕ’ವಾಗಿದೆ. ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿಗೆ ವಿರೋಧ ಇದೆ ಎಂದಾದರೆ ವಿಜಯೇಂದ್ರರಿಗೆ ಮಣೆ ಹಾಕುತ್ತಿರುವುದೇಕೆ? ಉತ್ತರಿಸುವ ನೈತಿಕತೆ ಇದೆಯೇ?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.