ಮನೆ ರಾಜ್ಯ ನೇಹಾಳ ಸಾವಿಗೆ ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಲಕ್ಷ್ಮೀ ಹೆಬ್ಬಾಳ್ಕರ್

ನೇಹಾಳ ಸಾವಿಗೆ ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಲಕ್ಷ್ಮೀ ಹೆಬ್ಬಾಳ್ಕರ್

0

ಹುಬ್ಬಳ್ಳಿ: ನೇಹಾಳ ಸಾವಿಗೆ ನಿಷ್ಪಕ್ಷಪಾತ, ನಿಖರವಾದ ತನಿಖೆ ನಡೆಸಿ ಸೂಕ್ತ ನ್ಯಾಯ ಒದಗಿಸಲಾಗುವುದು.‌ ಇದರಲ್ಲಿ ಸಂಶಯಬೇಡ. ಸರ್ಕಾರ ಅವರ ಕುಟುಂಬದೊಂದಿಗೆ ಇರಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.

Join Our Whatsapp Group

ಮೃತ ನೇಹಾ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೇಯ ಕೃತ್ಯ. ಇದನ್ನು ಎಲ್ಲ ಸಮಾಜಗಳು ತೀವ್ರವಾಗಿ ಖಂಡಿಸಲೇಬೇಕು. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದರು.

ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ಸೂಕ್ಷ್ಮ ಸಂದರ್ಭ. ಹೀಗಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ಬೇರೆ ಕಡೆಗಳಲ್ಲಿ ಆಗಿರುವ ಘಟನೆಗಳನ್ನು ಈ ಘಟನೆಗೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಸಮುದಾಯ ದೊಡ್ಡದಾಗಿದ್ದು, ಇಡೀ ಸಮಾಜ ಅವರೊಂದಿಗೆ ಇದೆ. ನಾನು ಕೂಡ‌ ನೇಹಾಳ ಕುಟುಂಬದೊಂದಿಗೆ ಇದ್ದೇನೆ. ಕುಟುಂಬಕ್ಕೆ ಸಾಂತ್ವನ, ಸಮಾಧಾನ ಹೇಳಿದ್ದೇನೆ. ಆದರೂ ತೀರದಂತಹ ದುಃಖ ಕುಟುಂಬಕ್ಕಿದೆ ಎಂದರು.

ನೇಹಾ ಹತ್ಯೆ ಘಟನೆಯನ್ನು ರಾಜಕಾರಣ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಘಟನೆಗಳಲ್ಲಿ ರಾಜಕಾರಣ ಬದಿಗಿಟ್ಟು, ಓರ್ವ ತಾಯಿಯಾಗಿ ಆ ಜೀವಕ್ಕೆ ನ್ಯಾಯ ಒದಗಿಸುವುದು ನನ್ನ ಆದ್ಯ ಕರ್ತವ್ಯ. ಇಂತಹ ಘಟನೆಗಳಲ್ಲಿ ರಾಜಕೀಯ ಕುರಿತು ಚರ್ಚೆ ಮಾಡಿದರೆ ತನಿಖೆಯ ಹಾದಿ ಬೇರೆ ಸ್ವರೂಪ ಪಡೆಯಲಿದೆ. ಹೀಗಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು.