ಮನೆ ರಾಜ್ಯ ನೇಹಾ ಕೊಲೆ ಪ್ರಕರಣ: ಆರೋಪಿ ಹೊರಗೆ ಬಂದರೆ ನಾವೇ ತಕ್ಕ ಶಿಕ್ಷೆ ಕೊಡುತ್ತೇವೆ: ಪ್ರಮೋದ ಮುತಾಲಿಕ್

ನೇಹಾ ಕೊಲೆ ಪ್ರಕರಣ: ಆರೋಪಿ ಹೊರಗೆ ಬಂದರೆ ನಾವೇ ತಕ್ಕ ಶಿಕ್ಷೆ ಕೊಡುತ್ತೇವೆ: ಪ್ರಮೋದ ಮುತಾಲಿಕ್

0

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ಆರೋಪಿ ಫಯಾಜ್ ಸಿಐಡಿ ತನಿಖೆಯಿಂದ ನಿರ್ದೋಷಿ ಎಂದು ಸಾಬೀತಾಗಿ ಹೊರಗೆ ಬಂದರೆ, ಅವನಿಗೆ ನಾವೇ ತಕ್ಕ ಶಿಕ್ಷೆ ಕೊಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

Join Our Whatsapp Group

ಮೃತ ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ಕೊಟ್ಟು ಅವಳ ತಂದೆ-ತಾಯಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಿರುವುದು ಸ್ವಾಗತಾರ್ಹ. ಆದರೆ, ರಾಜ್ಯ ಸರ್ಕಾರ ಒತ್ತಡ ಹೇರಿ ತನಿಖೆಯ ದಿಕ್ಕು ತಪ್ಪಿಸಿದರೆ ಅದಕ್ಕೆ ತಕ್ಕಪಾಠ ಅನುಭವಿಸಬೇಕಾಗುತ್ತದೆ. ನಿರ್ದೋಷಿಯಾಗಿ ಫಯಾಜ್ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಪೊಲೀಸ್ ಇಲಾಖೆ ಸಮರ್ಥವಾಗಿದೆ. ಆದರೆ, ರಾಜಕೀಯ ವ್ಯಕ್ತಿಗಳು ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಾರೆ. ಅವರ ಕೈಕಟ್ಟದೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ಮತ ಬ್ಯಾಂಕ್, ಮುಸ್ಲಿಂ ಓಲೈಕೆಗಳನ್ನು ಬಿಡಬೇಕು. ನೇಹಾಳನ್ನು ವ್ಯವಸ್ಥಿತವಾಗಿ ಕೊಲೆ ಮಾಡಿದ ಪ್ರಕರಣ ಇದಾಗಿದ್ದು, ಅನಗತ್ಯವಾಗಿ ತನಿಖೆ ವಿಳಂಬ ಮಾಡದೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಲವ್ ಜಿಹಾದ್ ಆಳವಾಗಿ ಬೇರೂರಿದ್ದು, ಇದರಿಂದಾಗಿ ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿವೆ. ಜಿಹಾದಿ ಮನಸ್ಥಿತಿಯವರಿಗೆ ಭಯವೇ ಇಲ್ಲದಂತಾಗಿದೆ. ನೇಹಾಗೆ 13 ಬಾರಿ ಚಾಕು ಇರಿದು ಕೊಲೆ ಮಾಡಲಾಗಿದೆ. ಆರೋಪಿ ಫಯಾಜ್‌ಗೆ ಸೂಕ್ತ ತರಬೇತಿ ನೀಡಿರುವ ಸಂಶಯವಿದ್ದು, ಸಿಐಡಿ ಅಧಿಕಾರಿಗಳು ಈ ಕುರಿತು ಆಳವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ನೇಹಾ ಕೊಲೆ ಪ್ರಕರಣ ಕಾಂಗ್ರೆಸ್‌ಗೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಅದನ್ನು ಸರಿಪಡಿಸಲು ಮುಸ್ಲಿಂ ಸಮುದಾಯದವರಿಂದ ಸಾಂತ್ವನ, ಪ್ರತಿಭಟನೆ ಮಾಡಿಸಲಾಗುತ್ತಿದೆ‌. ಅಂಜುಮನ್ ಇಸ್ಲಾಂ ಸಂಸ್ಥೆಯವರಿಗೆ ಅಷ್ಟೊಂದು ಕಳಕಳಿಯಿದಿದ್ದರೆ, ಫಯಾಜ್ ಕುಟುಂಬಕ್ಕೆ ಬಹಿಷ್ಕಾರ ಹಾಕಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ, ಹಿಂದೂ ಹುಡುಗಿಯರನ್ನು ಪ್ರೀತಿಸಿದರೆ ಬಹಿಷ್ಕಾರ ಹಾಕುತ್ತೇವೆ. ಲವ್ ಜಿಹಾದ್ ನಡೆಸಿದರೆ ಸ್ಮಶಾನದಲ್ಲಿ ಜಾಗ ನೀಡುವುದಿಲ್ಲ. ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಫತ್ವಾ ಹೊರಡಿಸಲಿ. ಅದನ್ನು ಬಿಟ್ಟು ನಾಟಕವಾಡುವುದು ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದರು.