ಮೈಸೂರು: ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 76 ವರ್ಷದ ಶ್ರೀನಿವಾಸ್ ಪ್ರಸಾದ್ ರನ್ನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ 1.20ರ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಮೈಸೂರಿನಲ್ಲೇ ಬೌದ್ಧಧರ್ಮದ ವಿಧಿವಿಧಾನದಂತೆ ಶ್ರೀನಿವಾಸ ಪ್ರಸಾದ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಬೋಧಿದತ್ತ ಮಾಹಿತಿ ನೀಡಲಾಗಿದೆ.
ರಾಜ್ಯ ಹಾಗೂ ಹೊರರಾಜ್ಯಗಳ ಬೌದ್ಧಭಿಕ್ಕುಗಳಿಂದ ಅಂತಿಮ ವಿಧಿವಿಧಾನ ಕಾರ್ಯಗಳು ನಡೆಯಲಿದ್ದು, ಎಂಟು ಬೌದ್ಧಭಿಕ್ಕುಗಳಿಂದ ಪಂಚಶೀಲತತ್ವ ಬೋಧನೆ, ತ್ರಿಸರಣ ಮೂಲಕ ಅಂತ್ಯಕ್ರಿಯೆ ನಡೆಯಲಿದೆ. ಬೌದ್ಧಧರ್ಮದ ಅನುಯಾಯಿ ಆಗಿದ್ದರಿಂದ ಅಹಿಂಸೆ, ಸತ್ಯದ ಸಂದೇಶದ ಮೂಲಕ ವಿಧಿವಿಧಾನ ನೆರವೇರಿಸಲಾಗುತ್ತೆ ಎಂದು ಅಂತಾರಾಷ್ಟ್ರೀಯ ಬುದ್ಧ ಭಿಕ್ಕು ಚಾರಿಟೇಬಲ್ ಟ್ರಸ್ಟ್ ಮಾಹಿತಿ ನೀಡಿದೆ.
ಚಾಮರಾಜನಗರ ಕ್ಷೇತ್ರದ ಹಾಲಿ ಸಂಸದರಾಗಿದ್ದ ಶ್ರೀನಿವಾಸ್ ಪ್ರಸಾದ್ ತಮ್ಮದೇ ಆದ ಪ್ರಾಬಲ್ಯವನ್ನು ಹೊಂದಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾರದ ಲೋಕಕ್ಕೆ ತೆರಳಿದ್ದಾರೆ.
ತಂದೆಯ ನಿಧನದ ಸುದ್ದಿ ಕುರಿತು ಪುತ್ರಿ ಪ್ರತಿಮಾ ಪ್ರಸಾದ್ ಹಾಗೂ ಅವರ ಅಳಿಯ ಹಾಗೂ ನಂಜನಗೂಡು ಶಾಸಕ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಗಂಭೀರವಾಗಿತ್ತು. ಎಲ್ಲಾ ವೈದ್ಯರು ಅವರನ್ನ ಗುಣಪಡಿಸಲು ಶ್ರಮ ಪಟ್ಟಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ನಮ್ಮನ್ನು ಅಗಲಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ನಿವಾಸಕ್ಕೆ ಕೊಂಡೊಯ್ದು ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು.
ರಾಜಕೀಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿರುವ ಶ್ರೀನಿವಾಸ್ ಪ್ರಸಾದ್ 6 ಬಾರಿ ಸಂಸದರಾಗಿ ಆಯ್ಕೆ ಆಗಿದ್ದರೆ, 4ಬಾರಿ ಶಾಸಕರಾಗಿ ಗೆದ್ದು ಬಂದಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಅಲ್ಲದೇ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಆಹಾರ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮೈಸೂರು-ಚಾಮರಾಜನಗರ ಭಾಗದ ದಲಿತ ಸಮುದಾಯದ ಪ್ರಭಾವಿ ಲೀಡರ್ ಕೂಡ ಆಗಿದ್ದರು.