ಮನೆ ಕಾನೂನು ಕೃಷ್ಣ ಜನ್ಮಭೂಮಿ ಪ್ರಕರಣ: ಶಾಹಿ ಈದ್ಗಾ ಮಸೀದಿ ನಿರ್ಬಂಧ ಕೋರಿ ಮಥುರಾ ನ್ಯಾಯಾಲಯದಲ್ಲಿ ಮನವಿ

ಕೃಷ್ಣ ಜನ್ಮಭೂಮಿ ಪ್ರಕರಣ: ಶಾಹಿ ಈದ್ಗಾ ಮಸೀದಿ ನಿರ್ಬಂಧ ಕೋರಿ ಮಥುರಾ ನ್ಯಾಯಾಲಯದಲ್ಲಿ ಮನವಿ

0

ಶಿವಲಿಂಗವನ್ನು ಪತ್ತೆಹಚ್ಚಲಾದ ಜ್ಞಾನವಾಪಿ ಮಸೀದಿಯೊಳಗಿನ ಸ್ಥಳ ನಿರ್ಬಂಧಿಸಲು ವಾರಾಣಸಿ ನ್ಯಾಯಾಲಯ ಆದೇಶಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿಗೆ ನಿರ್ಬಂಧ ಕೋರಿ ಮಥುರಾ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಜ್ಞಾನವಾಪಿ ಮಸೀದಿ ವಿವಾದದಲ್ಲಿ ವಾರಾಣಸಿ ನ್ಯಾಯಾಲಯ ನೀಡಿರುವ ತೀರ್ಪಿನಂತೆಯೇ ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿಯೂ ಪರಿಹಾರ ಒದಗಿಸಬೇಕು ಎಂದು ವಕೀಲರಾದ ಮಹೇಂದ್ರ ಪ್ರತಾಪ್ ಸಿಂಗ್ ಮತ್ತು ರಾಜೇಂದ್ರ ಮಹೇಶ್ವರಿ ಅವರು ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.

ವಿವಾದದಲ್ಲಿರುವ ಆಸ್ತಿ ಕೃಷ್ಣ ಜನ್ಮಭೂಮಿಯ ನಿಜವಾದ ಗರ್ಭಗುಡಿಯಾಗಿದೆ ಎಂದು ಮಥುರಾ ಸಿವಿಲ್ ನ್ಯಾಯಾಧೀಶರಿಗೆ (ಹಿರಿಯ ವಿಭಾಗ) ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ಸ್ಥಳದಲ್ಲಿ ಕಮಲ, ಶೇಷನಾಗ, ಓಂ, ಸ್ವಸ್ತಿಕ್‌ ಮುಂತಾದ ಹಿಂದೂ ಧಾರ್ಮಿಕ ಕುರುಹುಗಳಿವೆ. ಅವುಗಳಲ್ಲಿ ಕೆಲವು ನಾಶವಾಗಿದ್ದು ಇನ್ನೂ ಕೆಲವನ್ನು ಪ್ರತಿವಾದಿಗಳು ನಾಶಪಡಿಸಲು ಯತ್ನಿಸುತ್ತಿದ್ದಾರೆ.
  • ಈ ಪರಿಸ್ಥಿತಿಯಲ್ಲಿ ಹಿಂದೂ ಕುರುಹುಗಳನ್ನು ನಾಶಪಡಿಸಿದರೆ ಸಾಕ್ಷ್ಯಗಳು ನಾಪತ್ತೆಯಾಗುತ್ತವೆ. ಇದರಿಂದ ಫಿರ್ಯಾದುದಾರಿಗೆ ತುಂಬಲಾರದ ನಷ್ಟವಾಗುತ್ತದೆ.
  • ಹೀಗಾಗಿ ಮಸೀದಿಗೆ ಎಲ್ಲರಿಗೂ ನಿರ್ಬಂಧ ವಿಧಿಸಿ ಸೂಕ್ತ ಭದ್ರತೆಗೆ ವ್ಯವಸ್ಥೆ ಕಲ್ಪಿಸಬೇಕು.
  • ಪ್ರದೇಶಕ್ಕೆ ನಿರ್ಬಂಧ ವಿಧಿಸಿ, ಸೂಕ್ತ ಭದ್ರತಾ ಅಧಿಕಾರಿಗಳ ನೇಮಕ ಮಾಡುವಂತೆ ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಮತ್ತು ಸಿಆರ್‌ಪಿಎಫ್ ಕಮಾಂಡೆಂಟ್‌ಗೆ ನಿರ್ದೇಶಿಸಬೇಕು.

ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವುದರಿಂದ ಅದನ್ನು ತೆರವುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಮೊಕದ್ದಮೆಯನ್ನು ಸಿವಿಲ್ ನ್ಯಾಯಾಲಯ ಈ ಹಿಂದೆ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪು ಗುರುವಾರ ಮೇ 19ರಂದು ಹೊರಬೀಳಲಿದೆ.