ಮನೆ ಸುದ್ದಿ ಜಾಲ ಎಚ್‍ಐವಿ ಪೀಡಿತರು ಸೌಲಭ್ಯ ಗಳಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿ: ಡಿಸಿ ಡಾ.ಬಗಾದಿ ಗೌತಮ್

ಎಚ್‍ಐವಿ ಪೀಡಿತರು ಸೌಲಭ್ಯ ಗಳಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿ: ಡಿಸಿ ಡಾ.ಬಗಾದಿ ಗೌತಮ್

0

ಮೈಸೂರು (Mysuru)-ಜಿಲ್ಲೆಯಲ್ಲಿರುವ ಎಚ್‍ಐವಿ ಪೀಡಿತರು ಚಿಕಿತ್ಸೆ ಮತ್ತು ಇತರ ಸೌಲಭ್ಯಗಳಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ (Dr. Bagadi Gautam) ಸೂಚನೆ ನೀಡಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಚ್‍ಐವಿ ಸೋಂಕಿತರಿಗೆ ಸಾಮಾಜಿಕ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ವಸತಿ ಯೋಜನೆಯಡಿ ಹೆಚ್‍ಐವಿ ಪಾಸಿಟಿವ್ ರೋಗಿಗಳಿಗೆ ವಸತಿ ಒದಗಿಸುವ ಬಗ್ಗೆ, ಮನೆ ಮತ್ತು ನಿವೇಶನ ಇಲ್ಲದವರ ಬಗ್ಗೆ ತಾಲ್ಲೂಕುವಾರು ಪ್ರತ್ಯೇಕ ಪಟ್ಟಿ ತಯಾರಿಸಿ ನೀಡುವಂತೆ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಎಚ್‌ಐವಿ ಬಾಧಿತ ಮತ್ತು ಸೋಂಕಿತ ಮಕ್ಕಳ ಪೋಷಣೆಗೆ ಜಾರಿಗೆ ತಂದಿರುವ “ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಬಾಧಿತ ಮತ್ತು ಸೋಂಕಿತರಿಗೆ ಪ್ರತಿ ತಿಂಗಳಿಗೆ 1 ಸಾವಿರ ರೂ. ಸಹಾಯಧನ ನೀಡಲಾಗುತ್ತಿದ್ದು, ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ತಿಳಿಸಿದರು.

ಸೋಂಕಿತರು ಹಾಗೂ ಅವರ ಕುಟುಂಬದವರು ಕಳಂಕ ತಾರತಮ್ಯಕ್ಕೆ ಒಳಗಾಗದಂತೆ ರಕ್ಷಿಸುವುದು ಹಾಗೂ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮದ ಅಧಿಕಾರಿಗಳಾದ ಡಾ.ಮೊಹಮದ್ ಶಿರಾಜ್ ಅಹಮದ್ ಮಾತನಾಡಿ, ಜಿಲ್ಲೆಯಲ್ಲಿ ಈಗ 9139 ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್  ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.