ಮನೆ ಅಪರಾಧ ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

0

ವಿಜಯಪುರ: ಹತ್ತಿ ಮಾರಾಟ ಮಾಡಿದ ಹಣದೊಂದಿಗೆ ವ್ಯಾಪಾರಿಯ ನೌಕರರು ಕ್ಯಾಂಟರ್ ನಲ್ಲಿ‌ ಮರಳುತ್ತಿದ್ದಾಗ ಕ್ಯಾಂಟರ್ ಅಡ್ಡಗಟ್ಟಿ, ಅದರಲ್ಲಿದ್ದ ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ 32 ಲಕ್ಷ ರೂ. ಹಣ ದೋಚಿರುವ ದರೋಡೆ ಕೃತ್ಯ ಜಿಲ್ಲೆಯಲ್ಲಿ ನಡೆದಿದೆ.

Join Our Whatsapp Group

ಕಲಬುರಗಿ ಜಿಲ್ಲೆಯ ಜೀವರ್ಗಿ ಮೂಲದ ವ್ಯಾಪಾರಿ ಚಂದ್ರಕಾಂತ ಕುಂಬಾರ ಎಂಬವರಿಗೆ ಸೇರಿದ ಹಣ. 32 ಲಕ್ಷ ರೂ. ಹಣ ತರುತ್ತಿದ್ದ ಚಾಲಕ ಮಹಾಂತೇಶ ಕುಂಬಾರ ಹಾಗೂ ಸಹಾಯಕ ಮಲ್ಲಿ ಕೊಡಚಿ ದರೋಡೆಕೋರರಿಂದ ಹಲ್ಲೆಗೊಳಗಾಗಿ ಹಣ ಕಳೆದುಕೊಂಡವರು.

ಧಾರವಾಡ ಬಳಿಯ ಅಮ್ಮೀನಭಾವಿ ಗ್ರಾಮದಲ್ಲಿರುವ ಅರಳೆ ಕಾರ್ಖಾನೆಗೆ ಚಂದ್ರಕಾಂತ ಹತ್ತಿ ಮಾರಾಟ ಮಾಡಿದ್ದರು. ಹತ್ತಿ ಮಾರಾಟದಿಂದ ಬಂದಿದ್ದ 32 ಲಕ್ಷ ರೂ. ಹಣದೊಂದಿಗೆ ಹತ್ತಿ ಸಾಗಿಸಿದ್ದ ಕ್ಯಾಂಟರ್ ನಲ್ಲೇ ಚಾಲಕ ಮಹಾಂತೇಶ, ಸಹಾಯಕ ಮಲ್ಲು ಜೀವರ್ಗಿಗೆ ಮರಳುತ್ತಿದ್ದರು.

ಈ ಹಂತದಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿ ಬುಲೆರೋ ವಾಹನದಲ್ಲಿ ಬಂದ ದರೋಡೆಕೋರರು, ಕ್ಯಾಂಟರ್ ಅಡ್ಡಗಟ್ಟಿ, ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿಂದ ಕ್ಯಾಂಟರ್ ಗಾಜು ಒಡೆದು ವಾಹನ ನಿಲ್ಲಿಸಿದ್ದಾರೆ. ಬಳಿಕ ಮಹಾಂತೇಶ ಹಾಗೂ ಮಲ್ಲು ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿದ್ದಾರೆ.

ಬಳಿಕ 32 ಲಕ್ಷ ರೂ. ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ. ದರೋಡೆಕೋರರಿಂದ ಹಲ್ಲೆಗೊಳಗಾದ ಮಹಾಂತೇಶ, ಮಲ್ಲು ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಕೊಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿಯುತ್ತಿದ್ದಾರೆ.

ಸುದ್ದಿ ತಿಳಿಯುತ್ತಲೇ ವಿಜಯಪುರ ಜಿಲ್ಲೆಯ ಎಸ್ಪಿ ರಿಷಿಕೇಶ ಭಗವಾನ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕೊಲ್ಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ, ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಜಾಲ ಬೀಸಿದ್ದಾರೆ.