ಬೆಂಗಳೂರು: ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ (20) ಕೊಲೆ ಪ್ರಕರಣ ಭೇದಿಸಿರುವ ಸುಬ್ರಮಣ್ಯಪುರ ಠಾಣೆ ಪೊಲೀಸರು, ಕೃತ್ಯ ಎಸಗಿದ್ದ ಆರೋಪದಡಿ ಅವರ ತಮ್ಮನ ಸ್ನೇಹಿತನಾಗಿರುವ ಬಾಲಕನನ್ನು ಸೆರೆ ಹಿಡಿದಿದ್ದಾರೆ.
ಪದ್ಮನಾಭನಗರದ ಬೃಂದಾವನ ಲೇಔಟ್ನಲ್ಲಿರುವ ಮನೆಯೊಂದರಲ್ಲಿ ಪ್ರಬುದ್ಧ ಮೃತಪಟ್ಟಿದ್ದರು. ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದ ತಾಯಿ, ಕೊಲೆ ಆರೋಪದಡಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಬಾಲಕನನ್ನು ಬಂಧಿಸಿದ್ದಾರೆ.
ಆರೋಪಿ ಬಾಲಕ, ಪ್ರಬುದ್ಧಾ ಅವರ ಪರ್ಸ್ ನಿಂದ ₹ 2 ಸಾವಿರ ಕಳ್ಳತನ ಮಾಡಿದ್ದ. ಇದು ಗೊತ್ತಾಗುತ್ತಿದ್ದಂತೆ, ಹಣ ವಾಪಸು ನೀಡುವಂತೆ ಪ್ರಬುದ್ಧಾ ಒತ್ತಾಯಿಸಿದ್ದರು. ಇದೇ ಕಾರಣಕ್ಕೆ ಬಾಲಕ, ಪ್ರಬುದ್ಧಾ ಅವರನ್ನು ಕೊಲೆ ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಪ್ರಕರಣದ ಬಗ್ಗೆ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ, ‘ಪ್ರಬುದ್ಧಾ ಅವರ ತಮ್ಮನ ಸ್ನೇಹಿತನಾಗಿರುವ ಬಾಲಕನೇ ಆರೋಪಿ ಎಂಬುದು ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಪುರಾವೆಗಳನ್ನು ಸಂಗ್ರಹಿಸಿ ಬಾಲಕನ್ನು ವಶಕ್ಕೆ ಪಡೆಯಲಾಗಿದೆ. ಈತ ಬಾಲಕ ಆಗಿರುವುದರಿಂದ ಹೆಸರು ಬಹಿರಂಗಪಡಿಸಲಾಗದು. ಈತನನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.