ಮನೆ ಅಪರಾಧ ಹೈಕೋರ್ಟ್ ವಕೀಲೆ ಚೈತ್ರಾ ಅನುಮಾನಾಸ್ಪದ ಸಾವು ಪ್ರಕರಣ: ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದೆ

ಹೈಕೋರ್ಟ್ ವಕೀಲೆ ಚೈತ್ರಾ ಅನುಮಾನಾಸ್ಪದ ಸಾವು ಪ್ರಕರಣ: ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದೆ

0

 

ಹೈಕೋರ್ಟ್ ವಕೀಲೆ  ಚೈತ್ರಾ ಗೌಡ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದೆ. ಸಂಜಯನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.ಕೆಐಡಿಬಿ ಅಧಿಕಾರಿ ಶಿವಕುಮಾರ್ ಅವರ ಪತ್ನಿಯಾಗಿದ್ದ ಚೈತ್ರಾ ಗೌಡ ಹೈಕೋರ್ಟ್ ವಕೀಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಚೈತ್ರಾ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದವು. ಸೂಕ್ತ ತನಿಖೆಗೆ ಆಗ್ರಹಿಸಿ ಬೆಂಗಳೂರು ನಗರ ವಕೀಲರ ಸಂಘದಿಂದ ಕೂಡ ಪೊಲೀಸ್ ಕಮಿಷನರ್ ಹಾಗೂ ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆಯಲಾಗಿತ್ತು. ಚೈತ್ರಾ ಅತ್ಯಂತ ದಿಟ್ಟ ಹಾಗೂ ಧೈರ್ಯವಂತೆ ಆಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ವಕೀಲರ ಸಂಘ ತಿಳಿಸಿತ್ತು.

Join Our Whatsapp Group

ಚೈತ್ರಾ ಮನೆಯಲ್ಲಿ ಸಿಕ್ಕ ಡೆತ್​ನೋಟ್​ನಲ್ಲಿ ಮೂರು ತಿಂಗಳ ಹಳೇ ದಿನಾಂಕ ನಮೂದಿಸಲಾಗಿದೆ. ಖಿನ್ನತೆಗೆ ಒಳಗಾಗಿರುವುದಾಗಿ, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿತ್ತು.

ಇತ್ತ ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಚೈತ್ರಾ ಜೊತೆಗೆ ಮಾತನಾಡಿರುವ ವ್ಯಕ್ತಿಗಳ ಕರೆ ಲಿಸ್ಟ್​ ಮತ್ತು ಹಣಕಾಸು ವ್ಯವಹಾರದ ಪರಿಶೀಲನೆಗೆ ಮುಂದಾಗಿದೆ. ಅಲ್ಲದೆ, ಜೊತೆಗೆ ಚೈತ್ರಾ ಸಾವಿನ ಹಿಂದಿನ 15 ದಿನಗಳ ಸಿಸಿಟಿವಿ ಚೆಕ್​ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕ ಸಾವಿನ ಹಿಂದಿನ ರಹಸ್ಯ ಭೇದಿಸಲು ಸಿಸಿಬಿ ತಯಾರಿ ನಡೆಸಿದೆ.

ಸಂಜಯನಗರ ಪೊಲೀಸರ ತನಿಖೆ ಪ್ರಕಾರ, ಮಾನಸಿಕ ಖಿನ್ನತೆಯಿಂದಾಗಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಹಿಂದೆ ಯಾರ ಕೈವಾಡ ಇಲ್ಲದಿರುವುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅವರೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದಾಗಿ ಪೊಲೀಸರು ದೃಢಪಡಿಸಿಕೊಂಡಿದ್ದರು. ಪತ್ತೆಯಾಗಿದ್ದ ಡೆತ್​​ನೋಟ್ ಬಗ್ಗೆ ತನಿಖೆ ನಡೆಸಿದಾಗ ಅವರೇ ಬರೆದಿರುವುದು ಖಚಿತವಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.