ಮನೆ ಕಾನೂನು ಎಲ್ಲ ತೃತೀಯ ಲಿಂಗಿ ವ್ಯಕ್ತಿಗಳಿಗೆ ಸಮತಲ ಮೀಸಲಾತಿ ಒದಗಿಸಿ: ಮದ್ರಾಸ್ ಹೈಕೋರ್ಟ್

ಎಲ್ಲ ತೃತೀಯ ಲಿಂಗಿ ವ್ಯಕ್ತಿಗಳಿಗೆ ಸಮತಲ ಮೀಸಲಾತಿ ಒದಗಿಸಿ: ಮದ್ರಾಸ್ ಹೈಕೋರ್ಟ್

0

ರಾಜ್ಯದಲ್ಲಿ ತೃತೀಯಲಿಂಗಿಗಳೆಂದು ಗುರುತಿಸಿಕೊಳ್ಳುವ ಎಲ್ಲ ವ್ಯಕ್ತಿಗಳಿಗೂ ಸಮತಲ ಮೀಸಲಾತಿಯನ್ನು ಕಡ್ಡಾಯವಾಗಿ ಒದಗಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.

Join Our Whatsapp Group

ರಾಜ್ಯದಲ್ಲಿ ತಮ್ಮನ್ನು ತಾವು ಮಹಿಳೆಯರು ಎಂದು ಗುರುತಿಸಿಕೊಂಡ ತೃತೀಯಲಿಂಗಿ ವ್ಯಕ್ತಿಗಳಿಗೆ ಸಮತಲ ಮೀಸಲಾತಿ ನೀಡಿ ಉಳಿದವರಿಗೆ ಜಾತಿ ಆಧಾರಿತ ಲಂಬ ಮೀಸಲಾತಿ ಒದಗಿಸಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ನ್ಯಾ. ಜಿ ಕೆ ಇಳಂತಿರಾಯನ್ ಈಚೆಗೆ ರದ್ದುಗೊಳಿಸಿದರು.

ಸಮತಲ ಮೀಸಲಾತಿಯು ನಿರ್ದಿಷ್ಟ ವರ್ಗಕ್ಕೆ ನೀಡುವ ಮೀಸಲಾತಿಯಾಗಿದ್ದು ಇದು ಲಂಬ ಮೀಸಲಾತಿಯನ್ನು ಪಡೆಯುತ್ತಿರುವ ಎಲ್ಲ ಸಮೂಹಗಳನ್ನೂ ವ್ಯಾಪಿಸುತ್ತದೆ. ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಸಿ/ಎಸ್‌ಟಿ) ನೀಡಿರುವುದು ಲಂಬ ಮೀಸಲಾತಿಯಾದರೆ, ವಿಕಲಚೇತನರಿಗೆ, ಮಹಿಳೆಯರಿಗೆ ನೀಡಲಾಗುವ ಮೀಸಲಾತಿಯು ಎಲ್ಲ ಲಂಬ ಮೀಸಲಾತಿಗೂ ವ್ಯಾಪಿಸಿಕೊಳ್ಳುವ ಸಮತಲ ಮೀಸಲಾತಿಯಾಗುತ್ತದೆ.

ಆದ್ದರಿಂದ, ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಶೇಕಡಾ ಹತ್ತರಷ್ಟು ಲಂಬ ಮೀಸಲಾತಿ ಮತ್ತು ತೃತೀಯ ಲಿಂಗಿ ವ್ಯಕ್ತಿಗಳಿಗೆ ಶೇ ಐದರಷ್ಟು ಸಮತಲ ಮೀಸಲಾತಿ ಇದ್ದಾಗ, ಎಸ್‌ಸಿ/ಎಸ್‌ಟಿಗಳ ಮೀಸಲಾತಿಯಲ್ಲಿನ ಶೇಕಡಾ ಐದು ಸೀಟುಗಳನ್ನು ಜಾತಿ ಆಧಾರದಲ್ಲಿ ಆ ಸಮುದಾಯಗಳ ತೃತೀಯ ಲಿಂಗಿ ವ್ಯಕ್ತಿಗಳಿಗೆ ನೀಡಿದ್ದ ಸರ್ಕಾರದ ಆದೇಶವನ್ನು ನ್ಯಾಯಪೀಠವು ರದ್ದುಪಡಿಸಿತು.

ಈ ಆದೇಶ ಮನಸೋ ಇಚ್ಛೆಯಿಂದ ಕೂಡಿದ್ದು ಸಾಂವಿಧಾನಿಕ ತತ್ವಗಳ ಉಲ್ಲಂಘನೆ ಎಂದಿರುವ ಏಕಸದಸ್ಯ ಪೀಠ ಸುಪ್ರೀಂ ಕೋರ್ಟ್‌ ಎನ್‌ಎಎಲ್‌ಎಸ್‌ಎ ಪ್ರಕರಣದಲ್ಲಿ ನೀಡಿದ ತೀರ್ಪಿನನ್ವಯ ರಾಜ್ಯ ಸರ್ಕಾರ ಇನ್ನು 12 ವಾರದೊಳಗಾಗಿ ತೃತೀಯ ಲಿಂಗಿ ಸಮುದಾಯಕ್ಕೆ ಸಮತಲ ಮೀಸಲಾತಿ ಒದಗಿಸಬೇಕು ಎಂದಿದೆ.

ಒಮ್ಮೆ ತೃತೀಯ ಲಿಂಗಿ ಅಸ್ಮಿತೆಯನ್ನು ಪುರುಷ ಅಥವಾ ಮಹಿಳೆ ಎಂಬ ಲಿಂಗ ಅಸ್ಮಿತೆಯನ್ನಾಗಿ ಗುರುತಿಸಿದ ಮೇಲೆ ಮಹಿಳೆಯರಿಗೆ ಮಾತ್ರ ಸಮತಲ ಮೀಸಲಾತಿ ನೀಡಿ ತೃತೀಯಲಿಂಗಿ ವ್ಯಕ್ತಿಗಳನ್ನು ಪುರುಷರಂತೆ ಪರಿಗಣಿಸುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಒಮ್ಮೆ ಲಿಂಗ ಅಸ್ಮಿತೆಗೆ ಸಮತಲ ಮೀಸಲಾತಿ ನೀಡಿದರೆ ಲಿಂಗ ಅಸ್ಮಿತೆ ಆಧಾರದಲ್ಲಿ ತರತಮಕ್ಕೊಳಗಾದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿರುವ ತೃತೀಯಲಿಂಗಿ ಸಮುದಾಯಕ್ಕೂ ಇದೇ ಬಗೆಯ ಮೀಸಲಾತಿ ನೀಡಬೇಕು. ವಾಸ್ತವವಾಗಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದು ಎಲ್ಲಾ ತೃತೀಯ ಲಿಂಗಿ ವ್ಯಕ್ತಿಗಳಿಗೆ ಸಾರ್ವಜನಿಕ ಉದ್ಯೋಗ ಕ್ಷೇತ್ರದಲ್ಲಿ ಶೇ 1ರಷ್ಟು ಸಮತಲ ಮೀಸಲಾತಿ ಒದಗಿಸುತ್ತಿದೆ. ಅದರಂತೆ  ಎಸ್‌ಸಿ, ಎಸ್‌ಟಿ, ಎಂಬಿಸಿ ಮುಂತಾದ ಎಲ್ಲಾ ಸಮುದಾಯದ ಮೀಸಲಾತಿಗಳಲ್ಲಿ ಶೇ 1ರಷ್ಟು ಸಮತಲ ಮೀಸಲಾತಿ ಸೌಲಭ್ಯ ಕಲ್ಪಿಸುವುದಕ್ಕಾಗಿ  ಕರ್ನಾಟಕ ಸರ್ಕಾರಿ ನೌಕರರ ಸೇವಾ ಷರತ್ತುಗಳ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ”ಎಂದು ನ್ಯಾಯಾಲಯ ಹೇಳಿದೆ.

ತೃತೀಯ ಲಿಂಗಿ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಶುಶ್ರೂಷಕಿ ರಶಿಕಾ ರಾಜ್  ಅವರು ತಮಿಳುನಾಡು ನರ್ಸ್ ಮತ್ತು ಮಿಡ್‌ವೈವ್ಸ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಅವರು ಮೀಸಲಾತಿ ಸೌಲಭ್ಯ ಕೋರಿದಾಗ ಅತಿ ಹಿಂದುಳಿದ ವರ್ಗ ಮತ್ತು ಲಂಬ ಮೀಸಲಾತಿ ಅಡಿಯಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿತ್ತು. ತೃತೀಯ ಲಿಂಗಿಗಳನ್ನು ಲಿಂಗ ಅಸ್ಮಿತೆಯಡಿ ಪರಿಗಣಿಸಿ ಸಮತಲ ಮೀಸಲಾತಿ ಒದಗಿಸುವ ಬದಲಾಗಿ ತೃತೀಯ ಲಿಂಗಿ ಸಮುದಾಯವನ್ನು ಜಾತಿಯಾಗಿ ಪರಿಗಣಿಸಿ ಈ ಮೀಸಲಾತಿ ನೀಡಲಾಗಿದೆ. ಇದು ಮನಸೋ ಇಚ್ಛೆಯ ನಿರ್ಧಾರ ಎಂದು ದೂರಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ವಾದ ಪುರಸ್ಕರಿಸಿದ ನ್ಯಾಯಾಲಯ ಅಸ್ಮಿತೆಗಳ ಭಿನ್ನತೆಯ ವಿಚಾರವನ್ನು ತಿಳಿಸದೆಯೇ ತೃತೀಯ ಲಿಂಗಿ ಸಮುದಾಯಕ್ಕೆ ಒದಗಿಸಲಾದ ಯಾವುದೇ ಮೀಸಲಾತಿ ಪರಿಣಾಮಕಾರಿಯಾಗದು ಎಂದಿದೆ.