ಬೆಂಗಳೂರು: ಕೆಲಸದಿಂದ ಬರುತ್ತಿದ್ದ ದುಡ್ಡು ಸಾಕಾಗದೆ ದ್ವಿಚಕ್ರವಾಹನ ಕಳ್ಳತನಕ್ಕಿಳಿದಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ಯನ್ನು ಪುಲಕೇಶಿ ನಗರ ಠಾಣೆ ಪೊಲೀಸರು ಬಂಧಿಸಿ, 2.95 ಲಕ್ಷ ರೂ. ಬೆಲೆ ಬಾಳುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಎಚ್‌ಬಿಆರ್ ಲೇಔಟ್‌ನ ನಿವಾಸಿ ಜಮೀಲ್ (27) ಬಂಧಿತ.
2.95 ಲಕ್ಷ ರೂ. ಬೆಲೆ ಬಾಳುವ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 10ನೇ ತರಗತಿ ವ್ಯಾಸಂಗ ಮಾಡಿರುವ ಜಮೀಲ್ ರ್ಯಾಪಿಡೋ ಮತ್ತು ಸ್ವಿಗ್ಗಿಡೆಲಿವರಿ ಕೆಲಸ ಮಾಡುತ್ತಿದ್ದ. ಆರೋಪಿ ಜಮೀಲ್‌ಗೆ ಇದರಿಂದ ಬರುತ್ತಿದ್ದ ಹಣ ಸಾಕಾಗದೆ ದ್ವಿಚಕ್ರವಾಹನ ಕಳ್ಳತನ ಮಾಡಲು ಸಂಚು ರೂಪಸಿದ್ದ. ಅದರಂತೆ ಕಳವು ಮಾಡಿದ 3 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಯತ್ನಿಸಿದ್ದ. ವಾಹನಗಳ ದಾಖಲಾತಿ ಇಲ್ಲದ ಕಾರಣ ಮಾರಾಟ ಮಾಡಲು ಸಾಧ್ಯವಾಗದೇ ತನ್ನ ಬಳಿಯೇ ಇಟ್ಟುಕೊಂಡಿದ್ದ. ಪುಲಕೇಶಿ ಠಾಣೆಯಲ್ಲಿ ದಾಖಲಾಗಿದ್ದ ಸುಜುಕಿ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಜಮೀಲ್ ಸಿಕ್ಕಿ ಬಿದ್ದಿದ್ದಾನೆ.
ಆರೋಪಿಯ ಬಂಧನದಿಂದ ಬಾಣಸವಾಡಿ, ಕೊತ್ತನೂರು, ಹೆಬ್ಬಗೋಡಿ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಮೂರು ಪ್ರತ್ಯೇಕ ದ್ವಿಚಕ್ರವಾಹನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.