ಮನೆ ಕಾನೂನು ಅಶ್ವತ್ಥಾಮ ಅಸಹಜ ಸಾವು: ಸ್ವಯಂ ಪ್ರೇರಿತ ದೂರು ಸ್ವೀಕರಿಸಿದ ಕರ್ನಾಟಕ ಹೈಕೋರ್ಟ್

ಅಶ್ವತ್ಥಾಮ ಅಸಹಜ ಸಾವು: ಸ್ವಯಂ ಪ್ರೇರಿತ ದೂರು ಸ್ವೀಕರಿಸಿದ ಕರ್ನಾಟಕ ಹೈಕೋರ್ಟ್

0

ಬೆಂಗಳೂರು:  ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಶಿಬಿರದಲ್ಲಿ ಜೂನ್ 11 ರಂದು  ಅನುಮಾನಾಸ್ಪದವಾಗಿ ಸಾವನ್ನಪ್ಪಿದ 38 ವರ್ಷದ ದಸರಾ ಆನೆ ಅಶ್ವತ್ಥಾಮ ಅಸಹಜ ಸಾವಿನ ಕುರಿತ ಪಿಐಎಲ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಒಳಪಡಿಸಿತು.

Join Our Whatsapp Group

ವಿದ್ಯುದಾಘಾತದ ಕಾರಣದಿಂದಾಗಿ 38 ವರ್ಷದ ಅಶ್ವಥಾಮ ಎಂಬ ಆನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಶಿಬಿರದಲ್ಲಿ ಜೂನ್ 11ರಂದು ಮೃತಪಟ್ಟ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಆನೆಗಳ ಅಸ್ವಾಭಾವಿಕ ಸಾವಿನ ಬಗ್ಗೆ ಉಲ್ಲೇಖಿಸಿರುವ ಪತ್ರಿಕೆ ವರದಿಗಳ ಆಧಾರದ ಮೇಲೆ ಅಶ್ವತ್ಥಾಮ ಸಾವಿನ ಬಗ್ಗೆ ಮಾಹಿತಿ ಪಡೆದು ಜತೆಗೆ ಚಿಕ್ಕಮಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ವಿದ್ಯುತ್ ಆಘಾತ ಅಥವಾ ಇತರ ಕಾರಣಗಳಿಂದ ಮೃತಪಟ್ಟಿರುವ ಆನೆಗಳ ಕುರಿತು ಕೂಲಂಕುಷ ವಿಚಾರಣೆಗೆ ಆದೇಶಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಪೀಠ ನೋಟಿಸ್ ನೀಡಿತು.

ಈ ಪ್ರಕ್ರಿಯೆಯಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಹಿರಿಯ ವಕೀಲ ಪುತ್ತಿಗೆ ಆರ್.ರಮೇಶ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಪೀಠವು ನೇಮಿಸಿತು.

ವಿದ್ಯುದಾಘಾತದಿಂದ ಅಥವಾ ಇತರ ಅಸಹಜ ಕಾರಣಗಳಿಂದ ಕರ್ನಾಟಕದಲ್ಲಿ ಆನೆಗಳ ನಿರಂತರ ಸಾವು ಆತಂಕಕಾರಿ ವಿಷಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಕಾಳಜಿ ಮತ್ತು ಶ್ರದ್ಧೆಯ ಕೊರತೆಯಿಂದ ಈ ಘಟನೆ ನಡೆದಿದೆ ಎಂದು ಪತ್ರಿಕೆ ವರದಿಗಳು ಪ್ರತಿಬಿಂಬಿಸುತ್ತವೆ,” ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ರಾಜ್ಯದಲ್ಲಿ ಆನೆಗಳು ಮತ್ತು ಇತರ ವನ್ಯಜೀವಿ ಆಸ್ತಿಗಳ ಸುರಕ್ಷತೆ ಖಚಿತ ಪಡಿಸಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅಸ್ವಾಭಾವಿಕ ಘಟನೆಗಳನ್ನು ತಡೆಯಲು ಯಾವ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ ಎಂಬ ವಿವರಗಳನ್ನು ಸಲ್ಲಿಸುವಂತೆ ಪೀಠವು ಸರ್ಕಾರಕ್ಕೆ ನಿರ್ದೇಶಿಸಿತು.

ಈ ನಿಟ್ಟಿನಲ್ಲಿ ಅಧಿಕಾರಿಗಳು, ಅಭಯಾರಣ್ಯದ ಒಳಗೆ ಮತ್ತು ಹೊರಗೆ ಆನೆಗಳು ಮತ್ತು ಇತರ ವನ್ಯಜೀವಿಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಯಾವ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಆನೆಗಳ ಸಾವು ಸಂಭವಿಸಿದಾಗ ಅಧಿಕಾರಿಗಳ ಹೊಣೆಗಾರಿಕೆ ಹೇಗೆ ನಿಗದಿಪಡಿಸಿದರು ಎಂಬ ಬಗೆಗೂ ಪೀಠ ಮಾಹಿತಿ ಕೇಳಿತು.

“ಅಭಯಾರಣ್ಯದ ಒಳಗಿರಲಿ ಅಥವಾ ಅದರ ಹೊರಗಿರಲಿ, ಆನೆಗಳು ಮತ್ತು ಇತರ ವನ್ಯಜೀವಿಗಳಿಗೆ ಆರೈಕೆಯ ಅಗತ್ಯವಿರುತ್ತದೆ. ಅವುಗಳ ಸುರಕ್ಷತೆಯನ್ನು ಜಾಗರೂಕತೆಯಿಂದ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ವನ್ಯ ಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಪೀಠ ಸಲಹೆ ನೀಡಿದೆ.