ಮನೆ ರಾಜ್ಯ ಆಶ್ರಮ ಶಾಲೆ, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳಿಗೆ ಸಿಎಂ ತರಾಟೆ

ಆಶ್ರಮ ಶಾಲೆ, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳಿಗೆ ಸಿಎಂ ತರಾಟೆ

0

ಬೆಂಗಳೂರು: ಆಶ್ರಮ ಶಾಲೆಯ ಮಕ್ಕಳು, ಬಡವರು ಹಾಗೂ ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Join Our Whatsapp Group

ಇಂದು (ಮಂಗಳವಾರ) ಸಿಎಂ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಫುಲ್​ ಗರಂ ಆಗಿದ್ದಾರೆ.

ದಲಿತ, ಬುಡಕಟ್ಟು, ಬಡವರ ಮಕ್ಕಳ ಶಿಕ್ಷಣಕ್ಕೆ, ಹಾಸ್ಟೆಲ್ ಗಳಿಗೆ ಇಷ್ಟೆಲ್ಲಾ ಹಣ, ಸವಲತ್ತು ಕೊಡುತ್ತಿದ್ದರೂ ಮಕ್ಕಳ ಶೈಕ್ಷಣಿಕ ಮಟ್ಟ ಏಕೆ ಏರಿಕೆ ಆಗುತ್ತಿಲ್ಲ?. ಈ ಬಗ್ಗೆ ನಿರಂತರ ನಿಗಾ ಏಕೆ ವಹಿಸುತ್ತಿಲ್ಲ?, ಫಲಿತಾಂಶದಲ್ಲಿ ಏರಿಕೆ ಏಕೆ ಆಗುತ್ತಿಲ್ಲ ಎಂದು ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದರು. ಜೊತೆಗೆ ನಿಯಮಿತವಾಗಿ ಹಾಸ್ಟೆಲ್ ಗಳಿಗೆ, ಆಶ್ರಮ ಶಾಲೆಗಳಿಗೆ ಭೇಟಿ ನೀಡಬೇಕು ಹಾಗೂ ನಿರಂತರವಾಗಿ ಗುಣಮಟ್ಟ ಹೆಚ್ಚಿಸಲು ಶ್ರಮಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಸಭೆಯ ಮುಖ್ಯಾಂಶಗಳು ಇಂತಿವೆ

ಇಲಾಖೆಯ ಒಟ್ಟಾರೆ ಆಯವ್ಯಯದಲ್ಲಿ ಬಿಡುಗಡೆಯಾದ ಮೊತ್ತ 1884.01 ಕೋಟಿ ರೂ. ನಲ್ಲಿ 1879.35 ಕೋಟಿ ವೆಚ್ಚವಾಗಿದ್ದು, 99.75 % ಸಾಧನೆಯಾಗಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ 389 ವಿದ್ಯಾರ್ಥಿ ನಿಲಯಗಳು, ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು – 39,541 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಿದ್ದು, 194.71 ಕೋಟಿ ರೂ. ಒದಗಿಸಲಾಗಿದೆ.

ಎಸ್‌.ಎಸ್‌.ಎಲ್‌.ಸಿ. ಯಲ್ಲಿ ಶೇ. 77 ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶ ಉತ್ತಮ ಪಡಿಸಲು ಸೂಚನೆ ನೀಡಿದರು.

2,90,546 ವಿದ್ಯಾರ್ಥಿಗಳಿಗೆ 50.47 ಕೋಟಿ ರೂ. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಪಾವತಿ ಮಾಡಲಾಗಿದೆ. 2,48,887 ವಿದ್ಯಾರ್ಥಿಗಳಿಗೆ 302.64 ಕೋಟಿ ರೂ. ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಪಾವತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಹಾಸ್ಟೆಲ್‌ಗಳಿಗೆ ಸಂಜೆ ವೇಳೆಗೆ ಭೇಟಿ ನೀಡಿ, ಶುಚಿ ಕಿಟ್‌ಗಳು, ಆಹಾರ ಪದಾರ್ಥ ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆಲವು ಆಶ್ರಮ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ. ಮಕ್ಕಳು ರಾತ್ರಿ ಊಟವಾದ ನಂತರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಚಿಕ್ಕ ಮಕ್ಕಳು ಎಂದು ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲ ಸೌಲಭ್ಯ ಇದ್ದೂ, ಯಾಕೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ಕುರಿತು ಪರಾಮರ್ಶೆ ನಡೆಸಿ, ಪೋಷಕರಿಗೆ ಮನವರಿಕೆ ಮಾಡಲು ಸೂಚಿಸಿದರು.

ಅನುದಾನ ಲಭ್ಯವಿದೆ ಎಂಬ ಕಾರಣಕ್ಕೆ ಬೇಡಿಕೆ ಇಲ್ಲದೆ ಇದ್ದರೂ, ಹಾಸಿಗೆ, ಬೆಡ್‌ಶೀಟ್‌ ಮತ್ತಿತರ ವಸ್ತುಗಳನ್ನು ಅನಗತ್ಯವಾಗಿ ಖರೀದಿಸಿ ಗುಡ್ಡೆಹಾಕಿಕೊಳ್ಳುವುದನ್ನು ಸಹಿಸಲಾಗದು. ಅನಗತ್ಯವಾಗಿ 4 ಜಿ ವಿನಾಯಿತಿ ಪಡೆಯುವ ಬದಲು ನೇರವಾಗಿ ಟೆಂಡರ್‌ ಕರೆದು ಖರೀದಿ, ಸೇವೆಗಳನ್ನು ಪಡೆಯಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

ನೀವು ಬಡವರು, ದಲಿತರು, ಆದಿವಾಸಿ, ಬುಡಕಟ್ಟು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ನೀವು ಸೇವೆಯಲ್ಲಿರಲು unfit ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್‌ ಪ್ರಸಾದ್‌ ಮತ್ತು ಪರಿಶಿಷ್ಟ ಪಂಗಡಗಳ‌ ಕಲ್ಯಾಣ ಇಲಾಖೆ ನಿರ್ದೇಶಕ ಕಲ್ಲೇಶ್ ಸೇರಿ ಇತರೆ ಅಧಿಕಾರಿಗಳು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಉಪಸ್ಥಿತರಿದ್ದರು.