ಬೆಂಗಳೂರು: ಬಿಜೆಪಿ ಸರ್ಕಾರ ನಿರಂತರವಾಗಿ ಅಡುಗೆ ಅನಿಲ ಬೆಲೆ ಏರಿಕೆ ಮಾಡುತ್ತಿದ್ದು, ಕಳೆದ 8 ವರ್ಷಗಳ ಅವಧಿಯಲ್ಲಿ 845 ರೂ. ಏರಿಕೆ ಮಾಡಿದ್ದಾರೆ ಎಂದು ಕರ್ನಾಟಕ ಮಹಿಳಾ ಕಾಂಗ್ರೆಸ್ ಆರೋಪಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕರ್ನಾಟಕ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹರಿಹಾಯ್ದರು.
ಪ್ರಧಾನಮಂತ್ರಿಗಳ ಹೆಸರಿನಲ್ಲಿ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಘೋಷಣೆ ಮಾಡಿತ್ತು. ಈ ಯೋಜನೆ ಎಷ್ಟು ಜನರಿಗೆ ತಲುಪಿದೆ ಎಂಬುದು ಒಂದು ಕಡೆಯಾದರೆ, ಮಹಿಳೆಯರು ಹೊಗೆರಹಿತ ಅಡುಗೆ ವ್ಯವಸ್ಥೆಯಲ್ಲಿ ಅಡುಗೆ ಮಾಡುವಲ್ಲಿ ಈ ಯೋಜನೆ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದೇ ಹಳ್ಳ ಹಿಡಿದಿದೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಅಚ್ಛೇ ದಿನ ಕೊಟ್ಟುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 8 ವರ್ಷಗಳಲ್ಲಿ ಮಹಿಳೆಯರಿಗೆ ನಿರಂತರವಾಗಿ ಮೋಸ ಮಾಡಿಕೊಂಡು ಬಂದಿದೆ. ಈ ಅನ್ಯಾಯವನ್ನು ಕೇಳಿಸಿಕೊಳ್ಳುವ ಮುಖ್ಯಮಂತ್ರಿಗಳು ಇಲ್ಲವಾಗಿದ್ದಾರೆ. ಬಿಜೆಪಿ ಮಹಿಳಾ ನಾಯಕರು ಬೆಲೆ ಏರಿಕೆ ವಿಚಾರದಲ್ಲಿ ಯಾವಾಗ ಧ್ವನಿ ಎತ್ತುತ್ತಾರೆ? ಇನ್ನು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಅನಾಚಾರ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ಇತ್ತೀಚೆಗೆ ಆಸಿಡ್ ದಾಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆದಾಗ ಆ ಬಗ್ಗೆ ಮಾತನಾಡಲಿಲ್ಲ ಹಾಗೂ ಆ ಕುಟುಂಬಕ್ಕೆ ನ್ಯಾಯ ಕೊಡಿಸಲು ಅಧಿಕಾರಿಗಳ ಜತೆ ಮಾತನಾಡಲಿಲ್ಲ.”ಎಂದು ಪುಷ್ಪಾ ಅಮರನಾಥ್ ಕಿಡಿಕಾರಿದರು.
“ನಾನು ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ, ಶಶಿಕಲಾ ಜೊಲ್ಲೆ, ತಾರಾ, ಮಾಳವಿಕ ಅವರನ್ನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯುಪಿಎ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ 10 ರೂ. ಹೆಚ್ಚಾದರೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಅವರು ಈಗ ಎಲ್ಲಿದ್ದಾರೆ? ಈಗ ಅವರು ಮಾತನಾಡಲು ಧೈರ್ಯ ಬರುತ್ತಿಲ್ಲವೇ? ಬೆಲೆ ಇಳಿಸಿ ಮಹಿಳೆಯರಿಗೆ ನೆರವಾಗಲು ಮನಸ್ಸಿಲ್ಲವೇ?
ದಿನಬಳಕೆ ವಸ್ತುಗಳ ಬೆಲೆ ಏರಿಕೆ
ಬಿಜೆಪಿಯ ಬೆಲೆ ಏರಿಕೆ ವಿರುದ್ಧ ನಾವು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಿದರೂ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಇದೆ. ಇದನ್ನು ನಾವು ಧಿಕ್ಕರಿಸಿ, ಸರ್ಕಾರದ ಬಳಿ ನ್ಯಾಯವನ್ನು ಆಗ್ರಹಿಸುತ್ತೇವೆ.
ಸರ್ಕಾರ ಉಚಿತ ಸೌದೆ ಯೋಜನೆಯನ್ನು ಘೋಷಿಸಲಿ ಎಂದು ಆಗ್ರಹಿಸುತ್ತೇವೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನ ಜೀವನ ನಡೆಸುವುದೇ ಕಷ್ಟವಾಗಿದೆ” ಎಂದು ಪುಷ್ಪಾ ಅಮರನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ .