ಮನೆ ರಾಜ್ಯ ಸದ್ಯಕ್ಕೆ ಅಧಿಕಾರಿಗಳ ವರ್ಗಾವಣೆ ಮನವಿ ಪುರಸ್ಕರಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸದ್ಯಕ್ಕೆ ಅಧಿಕಾರಿಗಳ ವರ್ಗಾವಣೆ ಮನವಿ ಪುರಸ್ಕರಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಯಾವುದೆ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಮನವಿಯನ್ನು ಪುರಸ್ಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಗೆ ಖಡಕ್​ ಆಗಿ ಹೇಳಿದ್ದಾರೆ.

Join Our Whatsapp Group

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಒಪ್ಪಿಗೆ ನೀಡುವಂತೆ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.

ಸಚಿವರ ಒತ್ತಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಳೆದ ವರ್ಷ ವರ್ಗಾವಣೆ ವಿಚಾರವಾಗಿ ಸರ್ಕಾರದ ವಿರುದ್ಧ ಟೀಕೆಗಳು ಬಂದಿದ್ದು, ಹೀಗಾಗಿ ಈ ವಿಚಾರವನ್ನು ಕೈಗೆತ್ತಿಕೊಳ್ಳದಿರುವುದು ಜಾಣತನ. ಈ ವಿಷಯ ಇಲ್ಲಿಗೆ ಬಿಟ್ಟು ಬಿಡಿ ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳ ವರ್ಗ-1 ಮತ್ತು ಇದರ ಮೇಲಿನ ಅಧಿಕಾರಿಗಳ ವರ್ಗಾವಣೆಯನ್ನು ಸಿಎಂ ನಿರ್ವಹಿಸುತ್ತಾರೆ, ಆದರೆ ಕೆಳ ಹಂತದ ಅಧಿಕಾರಿಗಳ ವರ್ಗಾವಣೆಯನ್ನು ಸಚಿವರು ಮತ್ತು ಶಾಸಕರು ನಡೆಸುತ್ತಾರೆ.

ಪ್ರತಿ ವರ್ಷ ಮೇ ಮತ್ತು ಜೂನ್‌ ಅವಧಿಯಲ್ಲಿ ಸುಮಾರು ಶೇ 6 ರಿಂದ 8 ರಷ್ಟು ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಸರ್ವೆ ಸಾಮಾನ್ಯ. ಆದರೆ, ಈ ವರ್ಷ ಜೂನ್ 6 ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರವು ವರ್ಗಾವಣೆ ಮಾಡಿಲ್ಲ. ಚುನಾವಣಾ ಫಲಿತಾಂಶದ ನಂತರ ಅಧಿಕಾರಿಗಳ ವರ್ಗಾವಣೆಗೆ ಭಾರಿ ಒತ್ತಡ ಹಾಕಲಾಗುತ್ತಿದೆ.

ಕಳೆದ ವರ್ಷ 2023ರಲ್ಲಿ ಕೆಲವು ಇಲಾಖೆಗಳಲ್ಲಿ ಶೇ 6-8ರಷ್ಟು ಬದಲಾಗಿ ಶೇ.20-25 ರಷ್ಟು ಅಧಿಕಾರಿಗಳು ವರ್ಗಾವಣೆಗೊಂಡಿದ್ದರು. ಹಣಕಾಸಿನ ಲಾಭಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಹಗರಣದ ವಿವರಗಳನ್ನು ಒಳಗೊಂಡಿರುವ ಪೆನ್​ಡ್ರವ್​ ಅನ್ನು ತೋರಿಸಿದ್ದರು.

ಇಂಧನ ಇಲಾಖೆಯಲ್ಲಿ ಕೆಲವು ಸಚಿವರು ಪ್ರತಿ ವರ್ಗಾವಣೆಗೆ 10 ಕೋಟಿ ರೂ.ವರೆಗೆ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಒಬ್ಬ ನಿರ್ದಿಷ್ಟ ಅಧಿಕಾರಿ ದಿನಕ್ಕೆ 50 ಲಕ್ಷ ರೂ. ಪಡೆದಿದ್ದಾರೆ ಮತ್ತು ಅನೇಕರು ವರ್ಗಾವಣೆ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದ್ದರು.

ಅಧಿಕಾರಿಗಳ ವರ್ಗಾವಣೆ ವಿಚಾರ ಕಳೆದ ವರ್ಷ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಸರ್ಕಾರದ ಮೇಲೆ ಆರೋಪಿಸಿದ್ದರು.