ಮನೆ ರಾಜಕೀಯ ಪ್ರವೀಣ್, ಫಾಝಿಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ತಾರತಮ್ಯವಿಲ್ಲ: ಆರಗ ಜ್ಞಾನೇಂದ್ರ

ಪ್ರವೀಣ್, ಫಾಝಿಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ತಾರತಮ್ಯವಿಲ್ಲ: ಆರಗ ಜ್ಞಾನೇಂದ್ರ

0

ಶಿವಮೊಗ್ಗ(Shivamogga): ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್‌ನ ಮಹಮ್ಮದ್ ಫಾಝಿಲ್ ಕೊಲೆಗಳ ತನಿಖೆಯ ವಿಚಾರದಲ್ಲಿ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು.

ಶನಿವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರವೀಣ್ ಕೊಲೆ ಪ್ರಕರಣದಲ್ಲಿ ಈಗಿರುವ ಮಾಹಿತಿ ಪ್ರಕಾರ ಆರೋಪಿಗಳಿಗೆ ಎರಡು ರಾಜ್ಯಗಳ (ಕರ್ನಾಟಕ, ಕೇರಳ) ನಂಟು ಇದೆ. ಹೀಗಾಗಿ ತನಿಖೆಯ ಹೊಣೆ ಎನ್‌ಐಎಗೆ ಒಪ್ಪಿಸಿದ್ದೇವೆ. ಫಜಲ್‌ ಕೊಲೆ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಪ್ರಕರಣದ ಹಿನ್ನೆಲೆ ಅರಿಯದೇ ಎನ್‌ಐಎಗೆ ಕೊಡಲು ಆಗುವುದಿಲ್ಲ ಎಂದು ತಿಳಿಸಿದರು.

ಮತಾಂಧ ಶಕ್ತಿಗಳಿಂದ ನಡೆದ ಕೊಲೆ ಪ್ರಕರಣಗಳ ತ್ವರಿತ ವಿಚಾರಣೆಗೆ ನೆರವಾಗಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುತ್ತಿದ್ದೇವೆ. ಆದ್ಯತೆಯ ಮೇರೆಗೆ ಪ್ರಕರಣಗಳನು ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು. ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಹೇಳಿದರು.

ಸಾವಿಗೆ ಸಾವು ಪರಿಹಾರ ಎಂಬುದು ನಮ್ಮ ನಂಬಿಕೆ ಅಲ್ಲ. ಯಾವುದೇ ವ್ಯಕ್ತಿ ಸತ್ತಾಗ ಮಾನಸಿಕವಾಗಿ ಹಾಗೆ ಅನ್ನಿಸುತ್ತದೆ. ಅದು ಸಹಜ. ಪ್ರಾಣ ತೆಗೆಯುವುದು ರಕ್ತ ಹರಿಸುವುದು ಹುಡುಗಾಟಿಕೆಯ ಮಾತು ಅಲ್ಲ. ಅದನ್ನು ನಾವು ನಿಲ್ಲಿಸುತ್ತೇವೆ ಎಂದರು.

ಮಂಗಳೂರು ಈಗ ಶಾಂತವಾಗಿದೆ. ಇನ್ನು ಯಾರೂ ಅಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎಬಿವಿಪಿಯವರು ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಾಕ್ಷಣ ಅವರು ಸಿದ್ದರಾಮಯ್ಯನ ಪಕ್ಷಕ್ಕೆ ಹೋಗುತ್ತಾರೆ ಎಂದರ್ಥವಲ್ಲ. ಅವರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ ಎಂದರು.

ಹಿಂದಿನ ಲೇಖನಆರಾಧನಾ ಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಜ್ಯಗಳನ್ನು 32ನೇ ವಿಧಿಯಡಿ ಸರ್ವೋಚ್ಚ ನ್ಯಾಯಾಲಯಕ್ಕೆ ತರುವಂತಿಲ್ಲ: ಸುಪ್ರೀಂ
ಮುಂದಿನ ಲೇಖನಹಣ ಅಕ್ರಮ ವರ್ಗಾವಣೆ ಪ್ರಕರಣ: ಡಿಕೆಶಿ ಜಾಮೀನು ಆದೇಶ ಕಾಯ್ದಿರಿಸಿದ ಇಡಿ ಕೋರ್ಟ್