ಮನೆ ರಾಜ್ಯ ಹಗರಣಗಳನ್ನು ಮಾಡದೆ ಕಾರ್ಯನಿರ್ವಹಿಸಿ: ನೂತನ ಎಂಜನಿಯರುಗಳಿಗೆ ಪ್ರಿಯಾಂಕ್‌ ಖರ್ಗೆ ಕಿವಿಮಾತು

ಹಗರಣಗಳನ್ನು ಮಾಡದೆ ಕಾರ್ಯನಿರ್ವಹಿಸಿ: ನೂತನ ಎಂಜನಿಯರುಗಳಿಗೆ ಪ್ರಿಯಾಂಕ್‌ ಖರ್ಗೆ ಕಿವಿಮಾತು

ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ 347 ಎಂಜನಿಯರುಗಳ ನೇಮಕ

0

ಬೆಂಗಳೂರು: ಸರ್ಕಾರಿ ಉದ್ಯೋಗಕ್ಕೆ ಸೇರುವ ಅಧಿಕಾರಿಗಳು ತಮ್ಮ ಕುಟುಂಬಕ್ಕೆ ಒಳ್ಳೆಯ ಹೆಸರನ್ನು ತರುವದರೊಂದಿಗೆ ಯಾವುದೇ ಹಗರಣಗಳನ್ನು ಮಾಡದೆ ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುವಂತಾಗಬೇಕು ಎಂದು ಗ್ರಾಮೀಣಾಭಿವೃದ್ಧಿಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Join Our Whatsapp Group

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಒಂದೇ ಬಾರಿಗೆ ಲೋಕಸೇವಾ ಆಯೋಗದ ಮೂಲಕ ನೇಮಕಗೊಂಡ 347 ಎಂಜನಿಯರುಗಳಿಗೆ ಇಂದು ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ನಡೆದ ಸಮಾರಂಭದಲ್ಲಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ ಸಚಿವರು ಸೇವಾ ಮನೋಭಾವದಿಂದ ಉದ್ಯೋಗ ಮಾಡುವವರು ರಾಜಕೀಯದಿಂದ ದೂರ ಇರಬೇಕಾದುದು ಅತಿ ಮುಖ್ಯ ಎಂದು ಹೇಳಿದರಲ್ಲದೆ, ಇಷ್ಟೂ ಅಭ್ಯರ್ಥಿಗಳನ್ನು ಕೌನ್ಸೆಲಿಂಗ್‌ ಮೂಲಕ ಅನುಕೂಲವಾಗುವಂತಹ ಸ್ಥಳಗಳಿಗೆ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ʼಉದ್ಯೋಗ ಕೇಳ್ತಾರ, ಉದ್ಯೋಗ ಕೊಟ್ಟರೆ ಮನೆ ಬಗಲಿಗೆ ಬೇಕು ಅಂತಾರ, ಅದೂ ಮಾಡಿದ್ರೆ ಪಗಾರ ಸಾಲದು ಅಂತಾರʼ ಎಂದು ಸಚಿವರು ಹಾಸ್ಯ ಚಟಾಕಿ ಹಾರಿಸಿದರು.

ಸಚಿವರ ಬದ್ಧತೆಯಿಂದ ತ್ವರಿತ ಗತಿಯಲ್ಲಿ ನೇಮಕ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನೂರಾರು ಎಂಜನಿಯರ್‌ ಹುದ್ದೆಗಳು ಖಾಲಿ ಇದ್ದ ಪರಿಣಾಮವಾಗಿ ಗ್ರಾಮೀಣ ಜನರಿಗೆ ಶುದ್ಧ ನೀರನ್ನು ಸಮರ್ಪಕವಾಗಿ ವಿತರಿಸಲು ತೊಂದರೆಯಾಗಿದ್ದನ್ನು ಮನಗೊಂಡ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಕ್ಷಣವೇ ಹುದ್ದೆಗಳನ್ನು ತುಂಬಲು ಪ್ರಕ್ರಿಯೆ ಆರಂಭಿಸುವಂತೆ ಆದೇಶ ನೀಡಿದ ಪರಿಣಾಮವಾಗಿ ಇಂದು 347 ಎಂಜನಿಯರುಗಳು ಒಮ್ಮೆಲೆ ಇಲಾಖೆಯಲ್ಲಿ ನೇಮಕಗೊಳ್ಳುವಂತಾಯಿತು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್‌ ಹೇಳಿದರು. ಬೇರೆ ಇಲಾಖೆಗಳಲ್ಲಿ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಬಹಳ ದೀರ್ಘ ಕಾಲ ತೆಗೆದುಕೊಳ್ಳುವದಿದ್ದು ಸಚಿವರ ಬದ್ಧತೆಯಿಂದ ನಾಲ್ಕೇ ತಿಂಗಳಲ್ಲಿ ಎಂಜನಿಯರುಗಳ ನೇಮಕವಾದದ್ದು ವಿಶೇಷವಾಗಿದೆ ಎಂದೂ ಅಂಜೂಂ ಪರವೇಜ್‌ ಹೇಳಿದರು.

ನೇಮಕಗೊಂಡ 267 ಸಹಾಯಕ ಎಂಜನಿಯರುಗಳು ಹಾಗೂ 80 ಮಂದಿ ಜೂನಿಯರ್‌ ಎಂಜನಿಯರಗಳು ನೇಮಕಾತಿ ಪತ್ರಗಳನ್ನು ಪಡೆದರು. ಇಲಾಖೆಯ ಆಯುಕ್ತರಾದ ಕೆ.ನಾಗೇಂದ್ರ ಪ್ರಸಾದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.