ಕಲಬುರಗಿ : ರಾಜ್ಯ ಸರ್ಕಾರದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿರುವ ಡಿಸಿಎಂ ಹುದ್ದೆಗಳ ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತದೆ ಎಂದು ಬಿಜೆಪಿ ಮುಖಂಡ, ನೂತನ ಎಂಎಲ್ಸಿ ಸಿ.ಟಿ.ರವಿ ಭವಿಷ್ಯ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬೀಳಬೇಕು ಹಾಗೂ ಬೀಳಿಸಬೇಕೆಂಬ ಇರಾದೆ ಬಿಜೆಪಿ ಹೊಂದಿಲ್ಲ. ತನ್ನಿಂದತಾನೇ ಬೀಳಬಹುದು. ಇದಕ್ಕೆಲ್ಲ ಈ ಹಿಂದೆ ಕೇಳಿ ಬಂದ ಹಾಗೂ ಈಗ ಕೇಳಿ ಬರುತ್ತಿರುವ ಹೇಳಿಕೆಗಳೇ ಸಾಕ್ಷಿಯಾಗಿವೆ ಎಂದರು.
ಡಿಸಿಎಂ ಬಗ್ಗೆ ಆಗಾಗ್ಗೆ ಧ್ವನಿ ಮೊಳಗುತ್ತಲೇ ಇದೆ. ಲೋಕಸಭಾ ಚುನಾವಣೆ ಮುಂಚೆಯೂ ಎದ್ದಿತ್ತು. ಡಿಸಿಎಂ ಡಿಕೆಶಿ ಅವರು ಹುಷಾರು ಎಂದಿದ್ದ ಕ್ಕೆ ತಣ್ಣಗಾಗಿತ್ತು. ಆದರೆ ಈಗ ಧ್ವನಿ ಎದ್ದಿರುವುದನ್ನು ನೋಡಿದರೆ ಯಾವುದಕ್ಕೂ ಸೊಪ್ಪು ಹಾಕುವ ಲಕ್ಷಣಗಳು ಕಂಡು ಬರುತ್ತಿಲ್ಲ. ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಈಗ ಶಾಸಕರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಹೀಗಿದ್ದ ಮೇಲೆ ಸಂಖ್ಯಾಬಲ ಲೆಕ್ಕಕ್ಕೆ ಬರೋದೇ ಇಲ್ಲ ಎಂದು ಸಿ.ಟಿ.ರವಿ ಮಾರ್ಮಿಕವಾಗಿ ನುಡಿದರು.
ಗ್ಯಾರಂಟಿ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದು ಸರ್ಕಾರ ರಚನೆಯಾದಾಗಿನಿಂದಲೂ ಅಪಸ್ವರ ಎತ್ತುತ್ತಿದ್ದಾರೆ. ಈಗಂತು ಅಲ್ಲಲ್ಲಿ ಅಸಮಾಧಾನದ ಸಭೆಗಳು ನಡೆಯುತ್ತಿವೆ. ಬಿಜೆಪಿ ಬರೀ ಬೆಳವಣಿಗೆ ಮೇಲೆ ನಿಗಾ ವಹಿಸುತ್ತಿದೆ. ಯಾವುದೇ ಪಾತ್ರ ವಹಿಸುವುದಿಲ್ಲ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಆತ್ಮಾವಲೋಕನ ನಡೆಸಲಾಗುವುದು.ಸೋಲಿಗೆ ಕಾರಣಗಳ್ಯಾವವು ಎಂಬುದರ ಕುರಿತಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಕ ಭಾಗ ಸೇರಿ ಕೆಲವಡೆ ಬಿಜೆಪಿ ಸೋಲಲು ಪಕ್ಷದ ಮುಖಂಡರು ಕಾರಣ ಎಂಬ ಬಸವನಗೌಡ ಪಾಟೀಲ್ ಯತ್ನಾಳ ಹೇಳಿಕೆಯು ಅವರ ವೈಯಕ್ತಿಕ ವಾಗಿದೆ ಎಂದರು.
ಬೆಲೆ ಏರಿಕೆ ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ಯಾಗಿದೆ. ಇದರ ವಿರುದ್ದ ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಹೋರಾಡಲಿದೆ ಎಂದು ಸಿ.ಟಿ ರವಿ ಹೇಳಿದರು.