ಮನೆ ಅಂತಾರಾಷ್ಟ್ರೀಯ ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ: ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ: ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

0

ಲಂಡನ್:‌ ಬ್ರಿಟನ್‌ ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ (ಜುಲೈ 04) ನಡೆದ ಚುನಾವಣೆಯಲ್ಲಿ ಲೇಬರ್‌ ಪಕ್ಷ ಪ್ರಚಂಡ ಜಯಗಳಿಸುವ ಮೂಲಕ, ಲೇಬರ್‌ ಪಕ್ಷದ ನಾಯಕ ಕೀರ್‌ ಸ್ಟಾರ್ಮರ್‌ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಿದ್ಧತೆಯಲ್ಲಿದ್ದಾರೆ.

Join Our Whatsapp Group

2024ರ ಬ್ರಿಟನ್‌ ನ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತರೂಢ ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷ ತೀವ್ರ ಮುಖಭಂಗ ಅನುಭವಿಸಿದ್ದು, 13 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್‌ ಪಕ್ಷ ಗದ್ದುಗೆಯಿಂದ ಕೆಳಗಿಳಿದಂತಾಗಿದೆ.

650 ಸದಸ್ಯ ಬಲದ ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಲೇಬರ್‌ ಪಕ್ಷ ಬರೋಬ್ಬರಿ 409 ಸ್ಥಾನಗಳಲ್ಲಿ ಜಯಭೇರಿ ಗಳಿಸಿದೆ. ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷ ಕೇವಲ 113 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಹೀನಾಯ ಸೋಲನ್ನನುಭವಿಸಿದೆ.

ಬ್ರಿಟನ್‌ ಸಂಸತ್‌ ಚುನಾವಣೆಯ ಫಲಿತಾಂಶ ತುಂಬಾ ಅಚ್ಚರಿ ಏನಲ್ಲ, ಯಾಕೆಂದರೆ ಬಿಬಿಸಿ, ಐಟಿವಿ ಮತ್ತು Sky ಚುನಾವಣಾ ಪೂರ್ವ ಸಮೀಕ್ಷೆಗಳು ಲೇಬರ್‌ ಪಕ್ಷ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ನಿರೀಕ್ಷೆಯಂತೆ ಲೇಬರ್‌ ಪಕ್ಷ ಅಧಿಕಾರದ ಗದ್ದುಗೆ ಏರಿದೆ.

ಯಾರಿವರು ಕೀರ್‌ ಸ್ಟಾರ್ಮರ್?‌

ಬ್ರಿಟನ್‌ ಪ್ರಧಾನಿ ಹುದ್ದೆಗೆ ಏರಲಿರುವ ಕೀರ್‌ ಸ್ಟಾರ್ಮರ್‌ ತನ್ನನ್ನು, ನಾನೊಬ್ಬ ಕಾರ್ಮಿಕನ ಮಗ ಎಂದು ಚುನಾವಣೆ ವೇಳೆ ಹೇಳಿಕೊಂಡಿದ್ದರು. ಲೇಬರ್‌ ಪಕ್ಷದ ಮುಖಂಡ ಸ್ಟಾರ್ಮರ್‌ ತಂದೆ ಉಪಕರಣ ತಯಾರಿಸುವ ಕಾರ್ಮಿಕರಾಗಿದ್ದು, ತಾಯಿ ನರ್ಸ್‌ ಕೆಲಸ ನಿರ್ವಹಿಸಿದ್ದರು. ಆದರೆ ಅವರ ತಾಯಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ನಡೆಯಲು, ಮಾತನಾಡಲೂ ಸಾಧ್ಯವಾಗುತ್ತಿಲ್ಲ ಎಂದು ವರದಿ ತಿಳಿಸಿದೆ.

16 ವಯಸ್ಸಿನವರೆಗೆ ಸ್ಟಾರ್ಮರ್‌ ಶಿಕ್ಷಣದ ಶುಲ್ಕವನ್ನು ಸ್ಥಳೀಯ ಕೌನ್ಸಿಲರೊಬ್ಬರು ಪಾವತಿಸಿದ್ದರಂತೆ. ಬಿಬಿಸಿ ವರದಿ ಪ್ರಕಾರ, ಯೂನಿರ್ವಸಿಟಿ ಮಟ್ಟದ ಶಿಕ್ಷಣ ಪಡೆದ ಕುಟುಂಬದ ಮೊದಲ ವ್ಯಕ್ತಿ ಸ್ಟಾರ್ಮರ್.‌ ಇವರು ಕಾನೂನು ಪದವಿ ಪಡೆದಿದ್ದು, ಆಕ್ಸ್‌ ಫರ್ಡ್‌ ನಲ್ಲಿ ಬ್ಯಾರಿಸ್ಟರ್‌ ಮತ್ತು ಮಾನವ ಹಕ್ಕುಗಳ ಕಾಯ್ದೆಯ ವಿಶೇಷ ಪದವಿ ಪಡೆದಿರುವುದಾಗಿ ವರದಿ ತಿಳಿಸಿದೆ.

2008ರಲ್ಲಿ ಸ್ಟಾರ್ಮರ್‌ ಅವರನ್ನು ಇಂಗ್ಲೆಂಡ್‌ ನ ಹಿರಿಯ ಕ್ರೌನ್‌ ಪ್ರಾಸಿಕ್ಯೂಟರ್‌ ಆಗಿ ನೇಮಕ ಮಾಡಲಾಗಿತ್ತು. ಇದಕ್ಕೂ ಮೊದಲು ಕೆರೆಬಿಯನ್‌ ಮತ್ತು ಆಫ್ರಿಕಾದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಆರೋಪಿಗಳ ಪರ ವಕಾಲತ್ತು ನಡೆಸುತ್ತಿದ್ದರು.