ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪರಹರಿಸಿದ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಭವಾನಿ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಎಸ್ಐಟಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ನ್ಯಾ. ಸೂರ್ಯಕಾಂತ್, ಉಜ್ಜಲ್ ಭುಯಾನ್ ಅವರಿದ್ದ ದ್ವಿ ಸದಸ್ಯ ಪೀಠ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿತು. ಎಸ್ಐಟಿ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.
ಭವಾನಿ ರೇವಣ್ಣರ ಮಗನ ಮೇಲೆ ಗಂಭೀರ ಆರೋಪಗಳಿವೆ. ಆದರೆ, ಮಗ ಮಾಡಿದ ತಪ್ಪಿಗೆ ತಾಯಿಯ ಪಾತ್ರವೇನು? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಕಪಿಲ್ ಸಿಬಲ್, ಮಗನ ಅಪರಾಧದಲ್ಲಿ ತಾಯಿಯ ಪಾತ್ರವಿಲ್ಲ. ಆದರೆ ಸಂತ್ರಸ್ತೆಯ ಅಪಹರಣದ ಬಗೆಗಿನ ಪ್ರಕರಣ ಇದು. ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಲು ನಿರ್ದೇಶನ ನೀಡಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ ದಾಖಲಾಗಿದೆ. ಆಕೆ ಆರೋಪದಿಂದ ಮುಕ್ತ ಎನ್ನುವಂತಿಲ್ಲ, ವಿಚಾರಣೆ ಎದುರಿಸಬೇಕು. ಆಕೆಯನ್ನ ಬಂಧನದಿಂದ ರಕ್ಷಿಸಲು ಹೈಕೋರ್ಟ್ ಕಾರಣ ನೀಡಿದೆ. ವಿಚಾರಣಾ ನ್ಯಾಯಾಲಯವೂ ನಿರೀಕ್ಷಣಾ ಜಾಮೀನು ತಿರಸ್ಕರಸಿದೆ. ಆದರೆ, ಜಾಮೀನು ಏಕೆ ತಿರಸ್ಕಾರವಾಯಿತೆಂದು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಅಪಹರಣದ ಕುರಿತು ಪ್ರಕರಣವಿದು ಅಂತ ಕಪಿಲ್ ಸಿಬಲ್ ಮನವರಿಕೆ ಮಾಡಿದರು.
ಮೇಲ್ಮನವಿ ಅರ್ಜಿಯ ವಾದ ಆಲಿಸಿದ ಸುಪ್ರೀಂಕೋರ್ಟ್, ಭವಾನಿ ರೇವಣ್ಣಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆ ಮುಂದೂಡಿದೆ. ಹೀಗಾಗಿ ಭವಾನಿ ರೇವಣ್ಣ ಕಿಡ್ನ್ಯಾಪ್ ಕೇಸ್‌ನಲ್ಲಿ ಸಂಕಷ್ಟ ಎದುರಾಗಿದೆ.
ಏನಿದು ಪ್ರಕರಣ?
ಪ್ರಜ್ವಲ್ ರೇವಣ್ಣ ಅವರದ್ದು ಅಂತ ಬಿಡುಗಡೆಯಾಗಿರುವ ಅಶ್ಲೀಲ ವಿಡಿಯೋದಲ್ಲಿನ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂದು ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್ಡಿ ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಈಗಾಗಲೆ ಆರೋಪಿ ಬಾಬು ಅನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭವಾನಿ ರೇವಣ್ಣ ಅವರೂ ಕೂಡ ಎಸ್ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕು. ಈ ಸಂಬಂಧ ಎಸ್ಐಟಿ ಭವಾನಿ ರೇವಣ್ಣ ಅವರಿಗೆ ಎರಡೆರಡು ನೋಟಿಸ್ ಕೊಟ್ಟಿತ್ತು. ನೋಟಿಸ್ ನೀಡುತ್ತಿದ್ದಂತೆ ಭವಾನಿ ರೇವಣ್ಣ ಅವರು ವಿಚಾರಣಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ನೀರಿಕ್ಷಣಾ ಜಾಮೀನು ಅರ್ಜಿ ತಿರಸ್ಕತಿಸಿತ್ತು.
ಹೀಗಾಗಿ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ಎಸ್ಐಟಿ ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.