ಮನೆ ರಾಜ್ಯ ಶ್ರೀ ಸಿದ್ದಗಂಗಾ ಮಠದಲ್ಲಿ ಪ್ರವೇಶಾತಿ ಆರಂಭ: ಪೋಷಕರು, ಮಕ್ಕಳಿಂದ ತುಂಬಿದ ಮಠ

ಶ್ರೀ ಸಿದ್ದಗಂಗಾ ಮಠದಲ್ಲಿ ಪ್ರವೇಶಾತಿ ಆರಂಭ: ಪೋಷಕರು, ಮಕ್ಕಳಿಂದ ತುಂಬಿದ ಮಠ

0

ತುಮಕೂರು(Tumkur) : ತ್ರಿವಿಧ ದಾಸೋಹ ಖ್ಯಾತಿಯ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು, ಈ ಬಾರಿ ಸಿದ್ದಗಂಗಾ ಮಠದ ಶಾಲೆಗೆ ಪ್ರವೇಶಾತಿ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸಿದ್ದಗಂಗಾ ಮಠದ ಶಾಲೆಗಳ ಪ್ರವೇಶಾತಿ ಆರಂಭವಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಶ್ರೀಮಠದಲ್ಲಿ ಪ್ರವೇಶಾತಿ ಪಡೆಯಲು ಅರ್ಜಿ ಹಿಡಿದು ಬರುತ್ತಿದ್ದಾರೆ. ಮಠದ ಆವರಣ ಪೋಷಕರು, ಮಕ್ಕಳಿಂದ ತುಂಬಿ ತುಳುಕುತ್ತಿದೆ.

ಕೋವಿಡ್ ಎಫೆಕ್ಟ್​ನಿಂದಾಗಿ ಉಚಿತ ಶಿಕ್ಷಣ ಪಡೆಯಲು ಬಯಸಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್​ನಿಂದ ಉಂಟಾದ ಆರ್ಥಿಕ ಸಂಕಷ್ಟ ಇನ್ನೂ ಚೇತರಿಕೆ ಕಂಡಿಲ್ಲ. ಹಾಗಾಗಿ, ಪೋಷಕರು ತಮ್ಮ ಮಕ್ಕಳನ್ನು ಶ್ರೀಮಠದಲ್ಲಿ ಓದಿಸಲು ಮುಂದಾಗುತಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಈಗಾಗಲೇ ಸುಮಾರು 11 ಸಾವಿರ ಪ್ರವೇಶಾತಿ ಅರ್ಜಿಯನ್ನು ವಿತರಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿಗೆ ಅರ್ಜಿಗಳು ಬಂದಿವೆ. ಅರ್ಜಿ ಕೊಡುವುದನ್ನು ನಿಲ್ಲಿಸಲಾಗಿದೆ. ಆದರೂ ಅರ್ಜಿ ಕೇಳಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ, ಇರುವ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟು ಹೊಸ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಮಾಡಿಕೊಳ್ಳಬೇಕಾಗಿದೆ.

ಒಟ್ಟು 10 ಸಾವಿರ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಸೌಕರ್ಯ ಇದೆ. ಅದಕ್ಕೂ ಮೀರಿ ಇನ್ನೂ 1 ಸಾವಿರ ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಾತಿ ಪಡೆಯಬಹುದು. ಕೋವಿಡ್ ಸಂಕಷ್ಟದ ಹಿನ್ನೆಲೆ ಒಂದಿಷ್ಟು ಹೆಚ್ಚಿಗೆ ಮಕ್ಕಳನ್ನು ಸೇರಿಸಿಕೊಂಡು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಶ್ರೀಮಠದ ಆಡಳಿತ ಮಂಡಳಿ ಚಿಂತಿಸಿದೆ.

ರಾಯಚೂರು, ಬೀದರ್, ಕಲಬುರ್ಗಿಗಳಿಂದಲೂ ಪೋಷಕರು ಬಂದು ಪ್ರವೇಶಾತಿಗಾಗಿ ಕಾಯುತ್ತಿದ್ದಾರೆ. ಕೇವಲ 300 ರೂ. ಶುಲ್ಕ ಕಟ್ಟಿದರೆ ಸಾಕು ಉಚಿತ ಊಟ, ವಸತಿಯೊಂದಿಗೆ ಸಂಸ್ಕಾರಯುಕ್ತ ಶಿಕ್ಷಣ ಶ್ರೀಮಠದಲ್ಲಿ ಸಿಗುತ್ತದೆ.