ಮನೆ ರಾಜಕೀಯ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣವನ್ನು ಇ.ಡಿ, ಸಿಬಿಐ ರಾಜಕೀಯವಾಗಿ ಬಳಸಿಕೊಳ್ಳಬಾರದು: ಸಚಿವ ಪರಮೇಶ್ವರ್

ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣವನ್ನು ಇ.ಡಿ, ಸಿಬಿಐ ರಾಜಕೀಯವಾಗಿ ಬಳಸಿಕೊಳ್ಳಬಾರದು: ಸಚಿವ ಪರಮೇಶ್ವರ್

0

ಬೆಂಗಳೂರು: ಇಡಿ ಮತ್ತು ಸಿಬಿಐ ರಾಜಕೀಯವಾಗಿ ವಾಲ್ಮೀಕಿ ನಿಗಮದ ಅಕ್ರಮದ ಪ್ರಕರಣವನ್ನು ಬಳಸಿಕೊಳ್ಳಬಾರದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.

Join Our Whatsapp Group

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಇಡಿ ಅಧಿಕಾರಿಗಳಿಂದ ಶಾಸಕ ನಾಗೇಂದ್ರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಸಂಬಂಧ ಎಸ್‌ಐಟಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಇಡಿಯವರು ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟಿದ್ದಾರೆ. ಇಡಿ ಮತ್ತು ಸಿಬಿಐನ ರಾಜಕೀಯವಾಗಿ ಇದನ್ನು ಉಪಯೋಗಿಸಬಾರದೆಂಬುದು ನಮ್ಮ ಅನಿಸಿಕೆ. ಇವುಗಳು ರಾಜಕೀಯ ಅಸ್ತ್ರ ಆಗಬಾರದು. ತನಿಖೆ ಮಾಡುವುದರಲ್ಲಿ ಹಸ್ತಕ್ಷೇಪ‌ ಇಲ್ಲ ಎಂದು ತಿಳಿಸಿದರು.

ಇಡಿಯವರು ತನಿಖೆ ನಡೆಸ್ತಿದ್ದಾರೆ. ಅವರಿಗೆ ಏನು ಮಾಹಿತಿ ಸಿಕ್ಕಿದೆಯೋ ಆ ಆಧಾರದಲ್ಲಿ ಬಂಧಿಸಿದ್ದಾರೆ.‌ ಇದು ಕಾನೂನಿನ ಪ್ರಕಾರ ನಡೆಯುವ ಪ್ರಕ್ರಿಯೆ. ಆದರೆ ಇದನ್ನು ರಾಜಕೀಯವಾಗಿ ಬಳಸಬಾರದು. ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಬಾರದು. ತನಿಖೆಗೆ ನಮ್ಮ ತಕರಾರಿಲ್ಲ, ಎಸ್ಐಟಿ ತನಿಖೆ ನಡೆಯುತ್ತಿತ್ತು. ಪ್ರಕರಣದಲ್ಲಿ ಇದ್ದಕ್ಕಿದ್ದಂತೆ ಇಡಿ ಪ್ರವೇಶ ಆಯ್ತು ಎಂದರು.

ಬಿಜೆಪಿ ಪ್ರತಿಭಟನೆಗೆ ಅಡ್ಡಿ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಪ್ರತಿಭಟನೆ ಮಾಡಲು ಅಡ್ಡಿ ಮಾಡಲ್ಲ. ಆದರೆ ಹೇಗೆಂದರೆ ಹಾಗೆ ಪ್ರತಿಭಟನೆ ಮಾಡೋದು ಸರಿಯಲ್ಲ. ಸಾರ್ವಜನಿಕ ಆಸ್ತಿಗೆ ನಷ್ಟ, ಜನತೆಗೆ ತೊಂದರೆ ಕೊಟ್ಟು ಪ್ರತಿಭಟನೆ ಮಾಡಬಾರದು.‌ ಈ ಸಂಬಂಧ ಸುಪ್ರೀಂಕೋರ್ಟ್ ಆದೇಶವೇ ಇದೆ. ಇನ್ನೇನು ಸದನವೂ ಆರಂಭವಾಗುತ್ತೆ. ಅಲ್ಲೂ ಅವರು ಚರ್ಚೆ ಮಾಡಬಹುದಲ್ಲ‌ ಎಂದರು.

ನಮ್ಮ ಎಸ್ಐಟಿನವರು ನಾಗೇಂದ್ರ, ದದ್ದಲ್ ಇಬ್ಬರನ್ನೂ ಕರೆದು ವಿಚಾರಣೆ ಮಾಡಿದ್ದಾರೆ. ಅಗತ್ಯ ಕಂಡುಬಂದರೆ ಮತ್ತೆ ಕರೆಯುತ್ತಾರೆ. ದದ್ದಲ್ ಅವರು ಎಲ್ಲಿಗೂ ತಪ್ಪಿಸಿಕೊಂಡು ಹೋಗಿಲ್ಲ. ಇಲ್ಲೇ ಎಲ್ಲೋ ಅವರು ಅವರ ಕುಟುಂಬದವರ ಜತೆ ಇದ್ದಾರೆ. ನಿನ್ನೆನೂ ನಾನು ದದ್ದಲ್ ಬಗ್ಗೆ ಕೇಳಿದಾಗ ಅವರು ಇಲ್ಲೇ ಅವರ ಕುಟುಂಬದವರ ಜತೆ ಇದ್ದಾರೆ ಅಂದ್ರು ಎಂದರು.

ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಕೆ ಆರೋಪದಲ್ಲಿ ಇಡಿ‌ ದಾಳಿ ಆಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಇದು ನನಗೆ ಗೊತ್ತಿಲ್ಲ. ಇಡಿಯವ್ರೇನೂ ನಮ್ಮ ಪೊಲೀಸರಿಗೆ ಈ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ನಾವು ಊಹೆ ಮಾಡಿ ಹೇಳೋದು ಸರಿಯಲ್ಲ ಎಂದು ತಿಳಿಸಿದರು.

ಬಿಜೆಪಿ ಮಾಜಿ ಎಮ್‌ಎಲ್‌ಸಿ ಡಿ.ಎಸ್ ವೀರಯ್ಯ ಬಂಧನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದೊಂದು 40-50 ಕೋಟಿಯದ್ದು ಅವ್ಯವಹಾರದ ವಿಚಾರ. ವೀರಯ್ಯ ಅವರು ಹಿಂದೆ ದೇವರಾಜ ಅರಸು ನಿಗಮದ ಅಧ್ಯಕ್ಷರಾಗಿದ್ದಾಗ ಟ್ರಕ್ ಟರ್ಮಿನಲ್ ಸಂಸ್ಥೆಯಲ್ಲಿ ಅಕ್ರಮ ಆಗಿದೆ ಅಂತ ತನಿಖೆ ನಡೆಯುತ್ತಿದೆ. ಆ ತನಿಖೆ ಹಿನ್ನೆಲೆಯಲ್ಲಿ ವೀರಯ್ಯ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಕಾವೇರಿ ಸರ್ವಪಕ್ಷ ಸಭೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ತಾಂತ್ರಿಕ ಸಮಿತಿ ಏನು ವರದಿ ಕೊಡುತ್ತೋ ನೋಡಬೇಕು. ಎಷ್ಟು ನೀರು ಬರುತ್ತಿದೆ, ಎಷ್ಟು ನೀರು ನಾವು ಕೊಡಲು ಸಾಧ್ಯ ಅಂತ ಸಮಿತಿ ಹೇಳುತ್ತೆ. ಅವರಿಗೆ ಕೊಡುವಷ್ಟು ನೀರು ನಮ್ಮಲ್ಲಿ ಇರಬೇಕಲ್ಲ?. ಈಗ ತಾನೇ ಮಳೆ ಬರ್ತಿದೆ. ನೀರು ಬಂದ ನಂತರ ಎಷ್ಟು ಹಂಚಿಕೆ ಮಾಡೊಕ್ಕಾಗುತ್ತೋ ನೋಡಬೇಕು, ಫಾರ್ಮುಲಾ ಹಾಕಿ‌ ಕೊಟ್ಟಿರುತ್ತಾರಲ್ಲ ಎಂದು ತಿಳಿಸಿದರು.