ಕೊಪ್ಪಳ: ಒಂದು ತಿಂಗಳ ಹಿಂದೆ ದರ ಏರಿಸಿಕೊಂಡಿದ್ದ ಕೊತ್ತಂಬರಿ ಸೊಪ್ಪಿನ ಬೆಲೆಯು ದಿಢೀರನೆ ಕುಸಿದೆ. ಅಡುಗೆಯ ಅಂದ ಹೆಚ್ಚಿಸಲು, ರುಚಿ ಹೆಚ್ಚಿಸಲು ಬಹು ಬಳಕೆಯ ಕೊತ್ತಂಬರಿ ಸೊಪ್ಪಿನ ದರ ಒಂದು ತಿಂಗಳ ಹಿಂದೆ ಒಂದು ಕಂತೆಗೆ ಬರೋಬ್ಬರಿ 80 ರೂ. ಇತ್ತು. ಆದರೆ ಈಗ ದರ ಕುಸಿದಿದೆ. ಇದರಿಂದ ಕಂಗಾಲಾದ ಕೊಪ್ಪಳ ರೈತರು ತಾವೇ ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳದಲ್ಲಿ ರೈತರು ಕೊತ್ತಂಬರಿ ಸೊಪ್ಪಿನ ಬೆಳೆ ನಾಶ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಬೆಲೆ ಸಿಗದಿದ್ದಕ್ಕೆ, ಕೊತ್ತಂಬರಿ ಸೊಪ್ಪಿನ ಬೆಲೆ ದಿಢೀರ್ ಕುಸಿದಿದ್ದಕ್ಕೆ ಬೆಳೆ ನಾಶ ಪಡಿಸಿದ್ದಾರೆ.
ಯರೇಹಂಚಿನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರೈತರು ನೂರಾರು ಎಕರೆ ಕೊತಂಬರಿ ಬೆಳೆದಿದ್ದರು. ಸದ್ಯ ಈಗ ಕೊತ್ತಂಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಈ ವರ್ಷ ಒಂದು ಎಕರೆ ಕೊತಂಬರಿ ಸೊಪ್ಪು ಕೇವಲ 1000 ದಿಂದ 2000 ರೂಪಾಯಿಗೆ ಮಾರಾಟವಾಗಿದೆ. ವ್ಯಾಪಾರಸ್ಥರು ಕಡಿಮೆ ಬೆಲೆಗೆ ಕೊತ್ತಂಬರಿ ಖರೀದಿ ಮಾಡುತ್ತಿದ್ದಾರೆ.
ಕಳೆದ ವರ್ಷ ಒಂದು ಎಕರೆ ಕೊತ್ತಂಬರಿ ಸೊಪ್ಪು 16 ರಿಂದ 20 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ಯರೇಹಂಚಿನಾಳ ಗ್ರಾಮದ ರೈತ ಮಹಾಂತೇಶ್ ಕೋಳೂರ ಅವರು ಬೆಳೆ ನಾಶ ಮಾಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ 8 ಎಕರೆಯಲ್ಲಿ ಕೊತ್ತಂಬರಿ ಬೆಳೆದಿದ್ದೆ. ಆದರೆ ಕಟಾವು ಮಾಡಿ, ಮಾರುಕಟ್ಟೆಗೆ ಸಾಗಾಟ ಮಾಡಲು ಆಗುವ ವೆಚ್ಚವು ಕೂಡ ಬರದೇ ಇದ್ದಿದ್ದರಿಂದ ಬೆಳೆ ನಾಶ ಮಾಡ್ತಿದ್ದೀನಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.