ಮನೆ ಸುದ್ದಿ ಜಾಲ ಖ್ಯಾತ ನೇತ್ರ ತಜ್ಞ ಡಾಕ್ಟರ್ ಭುಜಂಗ ಶೆಟ್ಟಿ ನಿಧನ

ಖ್ಯಾತ ನೇತ್ರ ತಜ್ಞ ಡಾಕ್ಟರ್ ಭುಜಂಗ ಶೆಟ್ಟಿ ನಿಧನ

0

ಬೆಂಗಳೂರು: ನಾರಾಯಣ ನೇತ್ರಾಯಲಯದ ಮುಖ್ಯಸ್ಥ ಖ್ಯಾತ ನೇತ್ರ ತಜ್ಞ ಡಾಕ್ಟರ್ ಭುಜಂಗ ಶೆಟ್ಟಿ (69) ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ.

Join Our Whatsapp Group

ಶುಕ್ರವಾರ ಸಂಜೆ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿದೆ. ತಕ್ಷಣ ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿದ್ದ ಅವರು 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮೀಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ರೆಸಿಡೆನ್ಸಿ ಮಾಡಿದರು. 80 ರ ದಶಕದಲ್ಲಿ ಸಣ್ಣ ಕ್ಲಿನಿಕ್‌ನಲ್ಲಿ ಪ್ರಾರಂಭಿಸಿ ತದ ನಂತರ ಕರ್ನಾಟಕದ ಅತಿದೊಡ್ಡ ನಾರಾಯಣ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸ್ಥಾಪಿಸಿದರು. ಅವರು ತಜ್ಞ ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿದ್ದರು.

ಸಂತಾಪ ಸೂಚಿಸಿದ ನಿಯೋಜಿತ ಸಿಎಂ ಸಿದ್ದರಾಮಯ್ಯ: ನಾರಾಯಣ ನೇತ್ರಾಲಯದ ಖ್ಯಾತ ನೇತ್ರತಜ್ಞರಾದ ಡಾ. ಭುಜಂಗ ಶೆಟ್ಟಿ ಅವರ ನಿಧನದ ಸುದ್ದಿ ಆಘಾತವುಂಟುಮಾಡಿದೆ. ಭುಜಂಗ ಶೆಟ್ಟಿಯವರು ಲಕ್ಷಾಂತರ ಜನರಿಗೆ ದೃಷ್ಟಿ ಸಾಮರ್ಥ್ಯ ನೀಡುವ ಮೂಲಕ ಅವರ ಕುಟುಂಬಗಳಿಗೆ ಬೆಳಕಾದವರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದು ಹಾಕಿಕೊಂಡಿದ್ದಾರೆ.

ಡಿ.ಕೆ. ಶಿವಕುಮಾರ್ ಸಂತಾಪ: ಖ್ಯಾತ ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರ ನಿಧನಕ್ಕೆ ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಭುಜಂಗ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ರಾಜ್ಯ ಕಂಡ ಶ್ರೇಷ್ಠ ವೈದ್ಯರಲ್ಲಿ ಒಬ್ಬರು. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತ ಬಹಳ ದೂರದೃಷ್ಟಿ ಹೊಂದಿದ್ದ ವೈದ್ಯರಾಗಿದ್ದರು ಎಂದು ಡಿ ಕೆ ಶಿವಕುಮಾರ್​ ಸಂತಾಪ ವ್ಯಕ್ತಪಡಿಸಿದ್ದಾರೆ.

ಭುಜಂಗ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಆತ್ಮೀಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ನಾಯಕರಿಂದ ಸಂತಾಪ: ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ. ಖ್ಯಾತ ನೇತ್ರತಜ್ಞ, ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ ಕೆ.ಭುಜಂಗಶೆಟ್ಟಿ ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಸಾವಿರಾರು ಜನರಿಗೆ ದೃಷ್ಟಿ ನೀಡಿದ ನುರಿತ ವೈದ್ಯರೊಬ್ಬರನ್ನು ದೇಶ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ದೇವರು ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಸಂತಾಪ : ಟ್ವೀಟ್ ಮಾಡಿರುವ ಅವರು, ಭುಜಂಗ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ನೇತ್ರದಾನದ ಬಗ್ಗೆ ಜನರಲ್ಲಿ ಅಪಾರ ಅರಿವು ಮೂಡಿಸಿದ್ದ ಅವರು, ಅನೇಕರ ಬಾಳಿಗೆ ಬೆಳಕಾಗಿದ್ದರು ಎಂದಿದ್ದಾರೆ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಹಿಂದಿನ ಲೇಖನಇಂದು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ
ಮುಂದಿನ ಲೇಖನಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ