ಮನೆ ಕಾನೂನು ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಸಹಚರನ ಬಂಧನ: ಎನ್‌ಐಎ

ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಸಹಚರನ ಬಂಧನ: ಎನ್‌ಐಎ

0

ನವದೆಹಲಿ: ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಚರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ‌) ಬಂಧಿಸಿದೆ ಎಂದು ಅಧಿಕೃತ ಪ್ರಕಟಣೆ ಶುಕ್ರವಾರ ತಿಳಿಸಿದೆ.

Join Our Whatsapp Group

ಬಂಧಿತನನ್ನು ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂದು ಗುರುತಿಸಲಾಗಿದೆ. ಉದ್ಯಮಿಗಳಿಂದ ಸುಲಿಗೆ ಮಾಡಲು ಮಾರಕ ಆಯುಧಗಳನ್ನು ಪೂರೈಸಿದ ಪ್ರಕರಣದಲ್ಲಿ ಆತನನ್ನು ಗುರುವಾರ ಬಂಧಿಸಲಾಗಿದೆ ಎಂದು ಎನ್‌ಐಎ‌ ತಿಳಿಸಿದೆ.

‘ಪಂಜಾಬ್‌ನಲ್ಲಿ ಲಾಂಡಾನ ಏಜೆಂಟರಿಗೆ‌ ಬಲ್ಲಿ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ. ಉದ್ಯಮಿಗಳು ಮತ್ತು ಇತರರಿಂದ ಸುಲಿಗೆ ಸೇರಿದಂತೆ ದೊಡ್ಡ ಪ್ರಮಾಣದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಈ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿತ್ತು’ ಎಂದು ಸಂಸ್ಥೆ  ಹೇಳಿದೆ.

ಇದೇ ಪ್ರಕರಣದಲ್ಲಿ ಎನ್‌ಐಎ  ಇನ್ನೊಬ್ಬ ಖಲಿಸ್ತಾನಿ ಭಯೋತ್ಪಾದಕ ಸತ್‌ನಾಮ್‌ ಸಿಂಗ್‌ ಸತ್ತಾನ  ಸಹಚರ ಎನ್ನಲಾದ ಗುರುಪ್ರೀತ್ ಸಿಂಗ್ ಗೋಪಿ ಎಂಬಾತನನ್ನೂ ಬಂಧಿಸಿದೆ.

2023ರ ಜುಲೈ 10ರಂದು  ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಎನ್‌ಐಎ‌ ತನಿಖೆ ಆರಂಭಿಸಿತ್ತು.  ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಯೋಜಿಸಿದ್ದವು. ಪಿತೂರಿಯ ಭಾಗವಾಗಿ ಬಲ್ಜೀತ್ ಸಿಂಗ್, ಸತ್‌ನಾಮ್‌ ಸಿಂಗ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾನೆ ಎಂದು ಎನ್‌ಐಎ‌ ಹೇಳಿದೆ.

ಭಾರತದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಲಾಂಡಾ ಮತ್ತು ಸತ್‌ನಾಮ್‌ ಸಿಂಗ್‌ ಇಬ್ಬರೂ ಕೆನಡಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಎನ್ಐಎ ತನಿಖೆಯನ್ನು ಮುಂದುವರೆಸಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.