ಚಿಕ್ಕಮಗಳೂರು: ನಿರಂತರವಾಗಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸುರಿದ ಮಳೆಯಿಂದ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಭೂ ಕುಸಿತ, ಗುಡ್ಡ ಕುಸಿತವಾಗಿದ್ದು, ಒಂದು ವಾರಗಳ ಕಾಲ ಪ್ರವಾಸಿಗರಿಗೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಪ್ರವೇಶಕ್ಕೆ ಅವಕಾಶವಿಲ್ಲ. ಜುಲೈ 31ರ ವರೆಗೂ ಮುಳ್ಳಯ್ಯನಗಿರಿ ಭೇಟಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಸ್ಥಳೀಯ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.
ಪ್ರವಾಸಿಗರು ತೆರಳದಂತೆ ಕೈಮರ ಚೆಕ್ಪೋಸ್ಟ್ ಬಳಿ ಗೇಟ್ ಬಂದ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು ಶೃಂಗೇರಿ ಮಾರ್ಗ ಮಧ್ಯೆ ನೆಮ್ಮಾರು ಗ್ರಾಮದ ಬಳಿ ಹತ್ತಾರು ಕಡೆ ಭೂ ಕುಸಿತ, ಗುಡ್ಡ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಲಾಗಿದ್ದು 12,000 ಟನ್ ತೂಕದ ಲಾರಿ ಸೇರಿದಂತೆ ವಾಹನಗಳಿಗೆ ಸಂಚಾರ ನಿಷೇಧ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೊಂಚ ಮಳೆ ವಿರಾಮ ನೀಡಿದ್ದು ಒಂದು ವಾರಗಳ ಕಾಲ ಸುರಿದ ಮಳೆ ವಾಡಿಕೆ ಪ್ರಮಾಣದ 25% ಅಷ್ಟು ಹೆಚ್ಚಿದ್ದು ಗಾಳಿ ಸಹಿತ ಸುರಿದ ಮಳೆ ಒಂದೇ ವಾರಕ್ಕೆ ನೂರು ಕೋಟಿ ನಷ್ಟ ಮಾಡಿದೆ ರಾಜ್ಯದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರತಿ ದಿನ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ರಾಜ್ಯ, ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ವೀಕೆಂಡ್, ರಜಾ ದಿನ ಬಂತೆಂದರೆ ಇಲ್ಲಿ ಜನ ಪ್ರವಾಹವೇ ಕಂಡು ಬರುತ್ತದೆ. ಆದರೆ ಇದೀಗ, ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿದು, ಬೃಹತ್ ಗಾತ್ರದ ಕಲ್ಲು, ಮಣ್ಣು, ಮರ ರಸ್ತೆಗೆ ಬಿಳುತ್ತಿವೆ. ಹೀಗಾಗಿ ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧಿಸಿದ್ದು, ಪ್ರವಾಸಿಗರಲ್ಲಿ ನಿರಾಶೆ ಮೂಡಿದೆ.
100 ಕೋಟಿ ನಷ್ಟ
ಒಂದು ವಾರ ಸುರಿದ ಮಳೆಯಿಂದ ಸರ್ಕಾರಕ್ಕೆ 100 ಕೋಟಿ ರೂ. ನಷ್ಟವಾಗಿದೆ. ಕಳೆದ ಒಂದು ವಾರದಿಂದ ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಕಳಸ, ಮೂಡಿಗೆರೆ, ಎನ್ಆರ್ ಪುರ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿದ್ದಾನೆ. ಒಂದು ಕಡೆ ವರುಣಾರ್ಭಟಕ್ಕೆ ಜನ ಆತಂಕಗೊಂಡರೆ ಮತ್ತೊಂದು ಕಡೆ ಆರ್ಭಟಿಸುತ್ತಿದ್ದ ಹೇಮಾವತಿ, ತುಂಗಾ, ಭದ್ರಾ ನದಿಗಳು ನೆರೆ ಆತಂಕ ಸೃಷ್ಟಿ ಮಾಡಿತ್ತು.
ಲೋಕೋಪಯೋಗಿ ಇಲಾಖೆಗೆ 58 ಕೋಟಿ, PRED ಇಲಾಖೆಗೆ 41 ಕೋಟಿ ಜಸ್ಟ್ ಒಂದು ವಾರದಲ್ಲಿ ಮಳೆಯಿಂದ ನಷ್ಟವಾಗಿದೆ. ಜಿಲ್ಲೆಯಾದ್ಯಂತ 192 ಮನೆಗಳಿಗೆ ಹಾನಿಯಾಗಿದ್ರೆ, 41 ಸೇತುವೆ, 1849 ವಿದ್ಯುತ್ ಕಂಬಗಳು ನಾಶವಾಗಿದೆ. ಸುರಿದ ಮಳೆಗೆ 8.5 ಕಿಮೀ ಅಷ್ಟು ರಾಜ್ಯ ಹೆದ್ದಾರಿ ರಸ್ತೆಗೆ ಹಾನಿಯಾಗಿದ್ದರೆ ಚಾರ್ಮಾಡಿ, ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಭೂ ಕುಸಿತ, ಗುಡ್ಡ ಕುಸಿತವಾಗಿದೆ. ಮನೆ ಕಳೆದುಕೊಂಡ 77 ಜನರಿಗೆ ಜಿಲ್ಲಾಡಳಿತ ಪರಿಹಾರ ನೀಡಿದ್ದು, ಕಾಳಜಿ ಕೇಂದ್ರಗಳನ್ನ ತೆರೆದಿದೆ.